ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಸತತ 4ನೇ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ತನ್ನ ಗೆಲುವಿನ ಯಾತ್ರೆ ಮುಂದುವರಿಸಿದೆ. ಇನ್ನು ಈ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರ್ಹರಿ ಗೆಲುವಿನ ಬಳಿಕ ಟೀಮ್ ಇಂಡಿಯಾದ ಮತ್ತೋರ್ವ ಪ್ರಮುಖ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಕುತೂಹಲಕಾರಿ ಅಂಶವೊಂದನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ನಾಲ್ಕನೇ ವಿಕೆಟ್‌ಗೆ ಅಜೇಯ ಜೊತೆಯಾಟದಲ್ಲಿ ಭಾಗಿಯಾಗಿದ್ದ ರಾಹುಲ್, ಕೊಹ್ಲಿ ಇಂದಿನ ಪಂದ್ಯದ ಶತಕವನ್ನು ತ್ಯಾಗಕ್ಕೆ ಸಿದ್ದವಾಗಿದ್ದರು ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಾನೇ ಒಂಟಿ ರನ್‌ಗಳನ್ನು ನಿರಾಕರಿಸಿ ಶತಕ ಪೂರ್ತಿಗೊಳಿಸುವಂತೆ ಹೇಳಿದ್ದೆ ಎಂದಿದ್ದಾರೆ ಕೆಎಲ್ ರಾಹುಲ್.

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ರನ್ ಬೆನ್ನಟ್ಟುವ ಕೊನೆಯ ಹಂತದಲ್ಲಿ ಶತಕವನ್ನು ಪೂರ್ಣಗೊಳಿಸುವ ಮುನ್ನ ಮೂರು ಓವರ್‌ಗಳಲ್ಲಿ 8 ಡಾಟ್ ಬಾಲ್‌ಗಳನ್ನು ಮಾಡಿದ್ದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಹುಲ್ ಕೊನೆಯ ಮೂರ್ನಾಲ್ಕು ಓವರ್‌ಗಳಲ್ಲಿ ಸಿಂಗಲ್‌ಗಳನ್ನು ನಿರಾಕರಿಸುವುದು ಸರಿಯಲ್ಲ ಎನ್ನುವ ಭಾವನೆ ಹೊಂದಿದ್ದರು ಈ ಸಂದರ್ಭದಲ್ಲಿ ಅವರನ್ನು ತಾನು ಒಪ್ಪಿಸಿ ಶತಕ ಪೂರ್ತಿಗೊಳಿಸುವಂತೆ ಹೇಳಿರುವುದಾಗಿ ಹಂಚಿಕೊಂಡಿದ್ದಾರೆ.
ಕೊಹ್ಲಿ ಗೊಂದಲದಲ್ಲಿದ್ದರು
"ನಿಜ ಹೇಳಬೇಕೆಂದರೆ ಅವರು(ಕೊಹ್ಲಿ) ಬಹಳ ಗೊಂದಲದಲ್ಲಿದ್ದರು. ಒಂಟಿ ರನ್‌ಗಳನ್ನು ಪಡೆಯದಿರುವುದು ಬಹಳ ತಪ್ಪಾಗಿ ಕಾಣಿಸುತ್ತದೆ. ಇದು ವಿಶ್ವಕಪ್ ಪಂದ್ಯವಾಗಿದ್ದು ದೊಡ್ಡ ವೇದಿಕೆ. ನಾನು ನನ್ನ ವೈಯಕ್ತಿಕ ಮೈಲಿಗಲ್ಲು ತಲುಪಲು ಹೀಗೆ ಮಾಡುತ್ತಿದ್ದೇನೆ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದರು. ಆದರೆ ಅದಕ್ಕೆ ನಾನು ಅವರಿಗೆ ನಾವು ಈ ಪಂದ್ಯದಲ್ಲಿ ಬಹಳ ಸುಲಭವಾಗಿ ಗೆಲುವು ಸಾಧಿಸುತ್ತೇವೆ. ನೀವು ಖಡಿತಾ ಶತಕಕ್ಕೆ ಪ್ರಯತ್ನಿಸಿ. ಅಂತಿಮವಾಗಿ ಅದನ್ನು ಅವರು ಸಾಧಿಸಿದರು" ಎಂದಿದ್ದಾರೆ ಕೆಎಲ್ ರಾಹುಲ್.
ಕೊಹ್ಲಿ ಶತಕದಲ್ಲಿ ಅಂಪೈರ್ ಕೊಡುಗೆ!!
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವುದನ್ನು ನೋಡಲು ಅಂಪೈರ್ ಕೂಡ ಕಾತರವಾಗಿದ್ದರಾ ಎನ್ನುವ ಅಭಿಪ್ರಾಯಗಳು ಅಭಿಮಾನಿಗಳಿಂದ ವ್ಯಕ್ತವಾಗಿದೆ. ಇದಕ್ಕೆ ಕಾರಣವೂ ಇದೆ. ಅದು 42ನೇ ಓವರ್‌ನ ಆರಂಭಿಕ ಎಸೆತ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 97 ರನ್‌ಗಳಿಸಿ ಸ್ಟ್ರೈಕ್‌ನಲ್ಲಿದ್ದರು. ಆದರೆ ತಂಡದ ಗೆಲುವಿಗೆ ಬೇಕಿದ್ದಿದ್ದು ಎರಡು ರನ್ ಮಾತ್ರ. ಈ ಸಂದರ್ಭದಲ್ಲಿ ನಸುನ್ ಅಹ್ಮದ್ ಎಸೆದಿದ್ದ ಎಸೆತ ವೈಡ್‌ನಂತೆ ಕಂಡುಬಂದಿತ್ತು. ಆದರೆ ಅಂಪೈರ್ ಅದನ್ನು ವೈಡ್ ಅಲ್ಲ ಎಂದು ಘೋಷಿಸಿದ್ದರು. ಅದಾದ ಎಸೆಡನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ವಿಜಯದ ರನ್ ಬಾರಿಸುವ ಜೊತೆಗೆ ತಮ್ಮ ಶತಕವನ್ನು ಕೂಡ ಪೂರ್ಣಗೊಳಿಸಿದರು.
ವಿರಾಟ್ ಕೊಹ್ಲಿ 48ನೇ ಏಕದಿನ ಶತಕ
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಶತಕ ಏಕದಿನ ಮಾದರಿಯಲ್ಲಿ ಕೊಹ್ಲಿ ಸಿಡಿಸಿದ 48ನೇ ಶತಕವಾಗಿದೆ. ಈ ಮೂಲಕ ಏಕದಿನ ಮಾದರಿಯಲ್ಲಿ ಸಚಿನ್ ತೆಂಡೂಲ್ಕರ್ ಸಿಡಿಸಿದ 49 ಶತಕಗಳ ದಾಖಲೆಯ ಬೆನ್ನಿಗೆ ಬಂದು ನಿಂತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಮತ್ತೊಂದು ವಿಶ್ವದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ ಎರಡು ಶತಕಗಳು ಮಾತ್ರವೇ ಅಗತ್ಯವಿದೆ. ಇನ್ನು ಒಟ್ಟಾರೆಯಾಗಿ ಇದು ಕೊಹ್ಲಿಯ 78ನೇ ಶತಕ ಎನ್ನುವುದು ಗಮನಾರ್ಹ.