ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ, ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭರ್ಜರಿ ಫಾರ್ಮ್‌ಗೆ ಮರಳಿದರು. ನರೇಂದ್ರ ಮೋದಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಅಂಗಳಕ್ಕೆ ಇಳಿದಾಗ ಎಲ್ಲರ ಕಣ್ಣು ಇವರ ಮೇಲಿತ್ತು. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ವಿರಾಟ್ ತಮ್ಮ ಲಯವನ್ನು ಕಂಡು ಕೊಂಡರು.
ನರೇಂದ್ರ ಮೋದಿ ಅಂಗಳದಲ್ಲಿ ವಿರಾಟ್ ಕೊಹ್ಲಿ ತಮ್ಮ ನೈಜ ಆಟವನ್ನು ಆಡಿ ಅಬ್ಬರಿಸಿದರು. ಇಷ್ಟು ದಿನಗಳ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದು ಟೀಕೆಗೆ ಗುರಿಯಾಗಿದ್ದ ವಿರಾಟ್ ಅವರಿಗೆಲ್ಲಾ ತಕ್ಕ ಉತ್ತರವನ್ನೇ ನೀಡಿದರು. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ರೋಹಿತ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ವಿರಾಟ್ ತಂಡಕ್ಕೆ ಆಧಾರವಾದರು. ಇವರು ಆರಂಭಿಕ ಶುಭಮನ್ ಗಿಲ್ ಅವರೊಂದಿಗೆ ಕೂಡಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅಲ್ಲದೆ ರನ್ ವೇಗವನ್ನು ಸಹ ಕಾಯ್ದುಕೊಂಡು ಬ್ಯಾಟ್ ಮಾಡಿದರು.

ಮೂರನೇ ಏಕದಿನ ಪಂದ್ಯದಲ್ಲಿ 16 ರನ್ ಗಳಿಸುವ ಮೂಲಕ, ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದರು. ಏಳನೇ ಓವರ್‌ನ ಐದನೇ ಎಸೆತದಲ್ಲಿ ಸಿಂಗಲ್ ರನ್ ಪಡೆಯುತ್ತಿದ್ದಂತೆ ಈ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಇವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸಚಿನ್ ಇಂಗ್ಲೆಂಡ್ ವಿರುದ್ಧ 3990 ರನ್ ಗಳಿಸಿದ್ದರು. ಈಗ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ಇವರು ಮೂರನೇ ತಂಡದ ವಿರುದ್ಧ 4 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಸಾಧನೆ ತಮ್ಮದಾಗಿಸಿಕೊಂಡರು. ವಿರಾಟ್ ಕೊಹ್ಲಿ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಈ ಅದ್ಭುತ ಸಾಧನೆ ಮಾಡಿದ್ದರು.
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ವಿಶ್ವದ ಆಟಗಾರರ ಪೈಕಿ ಇವರಿಗೆ ಆರನೇ ಸ್ಥಾನ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ 63 ಇನಿಂಗ್ಸ್‌ಗಳಲ್ಲಿ 5028 ರನ್ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಅಲನ್ ಬಾರ್ಡರ್ ಇದ್ದು ಇವರ ಬುಟ್ಟಿಯಲ್ಲಿ 4850 ರನ್‌ಗಳಿವೆ. ಉಳಿದಂತೆ ಸ್ಟೀವನ್ ಸ್ಮಿತ್, ವಿವಿಯನ್ ರಿಚರ್ಡಸನ್, ರಿಕಿ ಪಾಂಟಿಂಗ್, ಸ್ಥಾನ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಬುಧವಾರ ನಡೆದ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಎಸೆದ 18ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ಪಡೆಯುತ್ತಿದ್ದಂತೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 73 ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು.