ಕೊಹ್ಲಿ ಕೊನೆ ಶತಕದ ಬಳಿಕ ಆಡಿರುವ ಪಂದ್ಯ, ಗಳಿಸಿದ ರನ್ ಮತ್ತು ಅರ್ಧಶತಕಗಳು ಎಷ್ಟು?

ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಓರ್ವ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ಅತಿ ಹೆಚ್ಚು ರನ್ ಹಾಗೂ ಶತಕಗಳ ದಾಖಲೆಯನ್ನು ಮುರಿಯಬಲ್ಲ ತಾಕತ್ತಿರುವ ಆಟಗಾರ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಕ್ಷರಶಃ ಮಂಕಾಗಿದ್ದಾರೆ.
ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ತಾವು ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದಾಗಿನಿಂದ ಎದುರಿಸಿರದ ರೀತಿಯ ಕೆಟ್ಟ ಫಾರ್ಮ್‌ನ್ನು ಎದುರಿಸುತ್ತಿದ್ದಾರೆ. ಇಲ್ಲಿಯವರೆಗೂ ಒಟ್ಟು 70 ಅಂತರರಾಷ್ಟ್ರೀಯ ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ 71ನೇ ಶತಕ ದಾಖಲಿಸಲಾಗದೇ ಸಾಕಷ್ಟು ದೊಡ್ಡ ಮಟ್ಟದ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.
2019ರ ನವೆಂಬರ್ 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಿಮವಾಗಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಯಾವುದೇ ಶತಕವನ್ನು ಬಾರಿಸಿಲ್ಲ. ಹೀಗೆ ಅಂದು ವಿರಾಟ್ ಕೊಹ್ಲಿ ತನ್ನ ಕೊನೆಯ ಅಂತರರಾಷ್ಟ್ರೀಯ ಶತಕ ಸಿಡಿಸಿದ ನಂತರ ಇಲ್ಲಿಯವರೆಗೂ ಎಷ್ಟು ರನ್ ಬಾರಿಸಿದ್ದಾರೆ, ಎಷ್ಟು ಅರ್ಧಶತಕ ಬಾರಿಸಿದ್ದಾರೆ ಮತ್ತು ಎಷ್ಟು ಬಾರಿ ಡಕ್ ಔಟ್ ಆಗಿದ್ದಾರೆ ಎಂಬುದರ ಕುರಿತಾದ ವಿವರ ಮುಂದೆ ಓದಿ.

ಅಂತಿಮ ಶತಕದ ನಂತರದ ಅಂಕಿ ಅಂಶ
ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ಸಿಡಿಸಿದ ತನ್ನ ಪಾಲಿನ 70ನೇ ಅಂತರರಾಷ್ಟ್ರೀಯ ಶತಕದ ನಂತರ ಕೊಹ್ಲಿಯ ಅಂಕಿಅಂಶ ಕೆಳಕಂಡಂತಿದೆ.
ವಿರಾಟ್ ಕೊಹ್ಲಿ ತನ್ನ ಅಂತಿಮ ಶತಕ ಬಾರಿಸಿದ ನಂತರ ಇಲ್ಲಿಯವರೆಗೂ ಒಟ್ಟು 64 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 75 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದಾರೆ ಹಾಗೂ 36.89ರ ಸರಾಸರಿಯಲ್ಲಿ 2509 ರನ್ ಕಲೆಹಾಕಿದ್ದಾರೆ. ಇನ್ನು ಕೊನೆಯ ಶತಕದ ಬಳಿಕ ಒಟ್ಟು 24 ಅರ್ಧಶತಕಗಳನ್ನು ಬಾರಿಸಿರುವ ಕೊಹ್ಲಿ ಕಲೆ ಹಾಕಿರುವ ಗರಿಷ್ಠ ರನ್ ಅಜೇಯ 94 ಹಾಗೂ 8 ಇನ್ನಿಂಗ್ಸ್‌ನಲ್ಲಿ ಡಕ್ ಔಟ್ ಆಗಿದ್ದಾರೆ. ಹೀಗೆ 75 ಇನ್ನಿಂಗ್ಸ್ ಕಳೆದಿದ್ದರೂ ಸಹ ವಿರಾಟ್ ಕೊಹ್ಲಿ ತಮ್ಮ 71ನೇ ಶತಕ ಬಾರಿಸುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ.

ಕೊಹ್ಲಿ ಬಾರಿಸಿರುವ ಶತಕಗಳ ಸಂಖ್ಯೆ
2009ರ ಡಿಸೆಂಬರ್ 24ರಂದು ಶ್ರೀಲಂಕಾ ವಿರುದ್ಧ ಕೋಲ್ಕೊತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಪ್ರಥಮ ಅಂತರರಾಷ್ಟ್ರೀಯ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ 2019ರ ಆಗಸ್ಟ್ 14ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಕೊನೆಯದಾಗಿ ಏಕದಿನ ಶತಕ ಬಾರಿಸಿದ್ದರು. ಇನ್ನು 2012ರ ಜನವರಿ 24ರಂದು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದ ಕೊಹ್ಲಿ ತಮ್ಮ ಪ್ರಥಮ ಟೆಸ್ಟ್ ಶತಕ ದಾಖಲಿಸಿದ್ದರು ಹಾಗೂ 2019ರ ನವೆಂಬರ್ 22ರಂದು ಬಾಂಗ್ಲಾ ವಿರುದ್ಧ ಕೊಹ್ಲಿ ಸಿಡಿಸಿದ ಶತಕ ಅವರ ಅಂತಿಮ ಟೆಸ್ಟ್ ಶತಕವಾಗಿದೆ. ಇನ್ನು ಏಕದಿನ ಕ್ರಿಕೆಟ್‍ನಲ್ಲಿ ವಿರಾಟ್ ಒಟ್ಟು 43 ಶತಕಗಳನ್ನು ಬಾರಿಸಿದ್ದರೆ, ಟೆಸ್ಟ್ ಕ್ರಿಕೆಟ್‍ನಲ್ಲಿ 27 ಶತಕ ಬಾರಿಸಿದ್ದಾರೆ.

ಒಟ್ಟಾರೆ ಪಟ್ಟಿಯಲ್ಲಿ ತೃತೀಯ ಸ್ಥಾನ
ಹೀಗೆ ಎರಡೂವರೆ ವರ್ಷಗಳಿಂದ ಶತಕ ಬಾರಿಸದೇ ವಿಫಲರಾಗಿರುವ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 70 ಶತಕಗಳನ್ನು ದಾಖಲಿಸಿದ್ದು, ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 71 ಶತಕ ಬಾರಿಸಿರುವ ರಿಕಿ ಪಾಂಟಿಂಗ್ ದ್ವಿತೀಯ ಸ್ಥಾನ ಹಾಗೂ 100 ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications