
ವಿರಾಟ್ ಕೊಹ್ಲಿ ಭಾರತ ತಂಡ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವದಿಂದ ಕೆಳಗಿಳಿದು ಒಂದು ವರ್ಷ ಕಳೆದಿದೆ. ಭಾರತ ತಂಡ ಮಾತ್ರವಲ್ಲದೆ ಐಪಿಎಲ್‌ನಲ್ಲಿ ಆರ್ ಸಿಬಿ ತಂಡದ ನಾಯಕತ್ವವನ್ನು ತೊರೆದು ಆಟಗಾರರಾಗಿ ಮುಂದುವರೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾಯಕತ್ವದ ತೊರೆದ ದಿನಗಳ ಬಗ್ಗೆ ಮಾತನಾಡಿದ್ದಾರೆ. ನಾಯಕತ್ವ ತೊರೆದ ನಂತರ ಮೈದಾನದಲ್ಲಿ ಸಾಮಾನ್ಯ ಆಟಗಾರನಂತೆ ಇರುವುದು ಸುಲಭವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ನಾಯಕನ ಸ್ಥಾನದಿಂದ ಕೆಳಗಿಳಿದರೂ ಕೆಲವು ಮುಖ್ಯ ಸಂದರ್ಭಗಳಲ್ಲಿ ತಂಡದಲ್ಲಿ ಕೆಲವು ಮುಖ್ಯ ಸಲಹೆಗಳನ್ನು ನೀಡಬೇಕೆನೆಸುತ್ತಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ತಂಡದ ಪ್ರಮುಖ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಹಾಗೆ ಸುಮ್ಮನಿರುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ 2021ರಲ್ಲಿ ನಡೆದ ಟಿ20 ವಿಶ್ವಕಪ್ ನಂತರ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದರು. 2022ರ ಜನವರಿಯಲ್ಲಿ ಅವರು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು. ಇದರ ನಡುವೆಯೇ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು.

ಅಭ್ಯಾಸವಾಗಲು ಬಹಳ ಸಮಯ ಬೇಕಾಯಿತು
ನಾಯಕತ್ವದಿಂದ ಕೆಳಗಿಳಿದ ನಂತರ ಅವರು ಸಾಮಾನ್ಯ ಆಟಗಾರನಂತೆ ಇರಲು ಬಹಳ ಸಮಯ ತೆಗೆದುಕೊಂಡಿತು ಎಂದು ಹೇಳಿದ್ದಾರೆ. ನಾಯಕತ್ವದ ಹೊಣೆಯನ್ನು ನಿಭಾಯಿಸಿದ್ದರಿಂದ ತಂಡದ ಸಂಕಷ್ಟದ ಸಮಯದಲ್ಲಿ ಹೋಗಿ ಸಲಹೆ ಸೂಚನೆಗಳನ್ನು ನೀಡಬೇಕು ಎನಿಸುತ್ತಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
"ನಾಯಕತ್ವದ ತೊರೆದ ನಂತರ ಏನೂ ಕಷ್ಟವಾಗಲಿಲ್ಲ ಎಂದರೆ ಸುಳ್ಳು ಹೇಳಿದಂತಾಗುತ್ತದೆ. ನಿಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲದಕ್ಕೂ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಆ ಸ್ಥಾನದಲ್ಲಿರಲು ಮತ್ತು ಅದನ್ನು ಪ್ರಕ್ರಿಯಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಂದರ್ಭವನ್ನು ಅರ್ಥ ಮಾಡಿಕೊಂಡರೆ ನೀವು ಸಲಹೆ ಕೊಡದಿರಲು ನಿರ್ಧರಿಸಬೇಕು" ಎಂದು ಹೇಳಿದ್ದಾರೆ.

ಆರ್ ಸಿಬಿ ನಾಯಕನ ಸ್ಥಾನ ತ್ಯಜಿಸಿದ ಕೊಹ್ಲಿ
2021ರ ಐಪಿಎಲ್ ನಂತರ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತೊರೆಯಲು ನಿರ್ಧರಿಸಿದರು. 2022ರ ಆವೃತ್ತಿಗಾಗಿ ಆರ್ ಸಿಬಿ ಫಾಫ್ ಡು ಪ್ಲೇಸಿಸ್ ನಾಯಕನಾಗಿ ನೇಮಕವಾದರು. ವಿರಾಟ್ ಕೊಹ್ಲಿ ಫಾಫ್ ಡು ಪ್ಲೆಸಿಸ್‌ಗೆ ಮನಸಾರೆ ಅಭಿನಂದಿಸಿದ್ದರು.
"ನಾನು ಫಾಫ್ ಬಳಿಗೆ ಹೋಗಿ ಬಿಕ್ಕಟ್ಟಿನ ಸಂದರ್ಭಗಳಲ್ಲಿ 'ನಾನು ಇದನ್ನು ಮಾಡಬೇಕು ಎಂದು ನಾನು ಬಲವಾಗಿ ಭಾವಿಸುತ್ತೇನೆ' ಎಂದು ಅನೇಕ ಬಾರಿ ಹೇಳಿದ್ದೇನೆ. ಡುಪ್ಲೆಸಿಸ್ ಕೂಡ ಹಲವು ಬಾರಿ ನಾನು ನೀಡಿದ ಸಲಹೆಗಳನ್ನು ಸಂತೋಷವಾಗಿ ತೆಗೆದುಕೊಂಡಿದ್ದಾರೆ." ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲಿ 199 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಭಾರತ 118 ಪಂದ್ಯಗಳಲ್ಲಿ ಜಯಗಳಿಸಿದ್ದರೆ, 63 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಗೆಲುವಿನ ಶೇಕಡಾವಾರು 59.09 ಆಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2018-19ರಲ್ಲಿ ಭಾರತ 71 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆತಿಥೇಯರ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದ ಸಾಧನೆ ಮಾಡಿತು.