
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸುತ್ತಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿತ್ತು.
ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಚೊಚ್ಚಲ ಪಂದ್ಯದಲ್ಲಿಯೇ ಸೋಲುಂಡಿರುವ ಟೀಂ ಇಂಡಿಯಾ ಇದಕ್ಕೂ ಮುನ್ನ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿತ್ತು. ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯ ಚೊಚ್ಚಲ ಪಂದ್ಯದಲ್ಲಿಯೇ ಸೋತು ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಸೋಲಿನ ದವಡೆಯಿಂದ ಪಾರಾಗಬೇಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಇನ್ನೆರಡು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾಗಿದೆ.
ಹೀಗೆ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲಗಳೊಂದಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ದ್ವಿತೀಯ ಏಕದಿನ ಪಂದ್ಯ ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 55 ರನ್ ಗಳಿಸಿದರೆ, ಶಿಖರ್ ಧವನ್ 29 ರನ್ ಗಳಿಸಿದರು ಹಾಗು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದು 71 ಎಸೆತಗಳಲ್ಲಿ 85 ರನ್ ಬಾರಿಸುವುದರ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ಇನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ತಂಡದ ಇತರೆ ಆಟಗಾರರಾದ ಶಿಖರ್ ಧವನ್, ಜಸ್ಪ್ರೀತ್ ಬುಮ್ರಾ ಹಾಗೂ ಯಜುವೇಂದ್ರ ಚಹಲ್ ಜೊತೆ ಡಗ್ ಔಟ್‌ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಡಾನ್ಸ್ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾಮೆಂಟರಿಗಾರರು ಕೂಡ ವಿರಾಟ್ ಕೊಹ್ಲಿ ಡಾನ್ಸ್‌ನಿಂದ ಮನರಂಜನೆ ಪಡೆದಿದ್ದಾರೆ.
ಎಲ್ಲಾ ಮಾದರಿಯ ನಾಯಕತ್ವ ಕಳೆದುಕೊಂಡ ಕೊಹ್ಲಿ:
ಹೌದು, ಕಳೆದ ವರ್ಷದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ ಏಕದಿನ ನಾಯಕತ್ವದಿಂದಲೂ ಕೂಡ ತೆಗೆದುಹಾಕಿತ್ತು. ಹೀಗೆ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಕೂಡ ರಾಜೀನಾಮೆಯನ್ನು ಸಲ್ಲಿಸಿದರು.