
ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಹೀನಾಯವಾಗಿ ಸೋಲನ್ನು ಕಂಡ ಟೀಮ್ ಇಂಡಿಯಾ ಇದೀಗ ಭಾರತದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಈ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಲಿದ್ದಾರೆ. ಹೀಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಮೊದಲು ಘೋಷಿಸಿದಂತೆ ಭಾರತದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಹಾವಳಿಯಿಂದ ಇದೀಗ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈಗಾಗಲೇ ಇತ್ತಂಡಗಳ ಆಟಗಾರರು ಕೂಡ ನರೇಂದ್ರ ಮೋದಿ ಕ್ರೀಡಾಂಗಣ ತಲುಪಿದ್ದು, ಅಭ್ಯಾಸಗಳನ್ನು ಆರಂಭಿಸಿದ್ದಾರೆ. 3 ತಿಂಗಳುಗಳ ಬಳಿಕ ರೋಹಿತ್ ಶರ್ಮಾ ಮತ್ತೆ ಕಣದಲ್ಲಿ ಕಾಣಿಸಿಕೊಂಡಿದ್ದು, ಬ್ಯಾಟ್ ಹಿಡಿದು ಅಭ್ಯಾಸ ನಡೆಸುತ್ತಿದ್ದಾರೆ. ಹಾಗೂ ನಾಯಕನಾಗಿ ತಂಡದ ಇತರ ಆಟಗಾರರಿಗೆ ರೋಹಿತ್ ಶರ್ಮಾ ಸಲಹೆಗಳನ್ನು ನೀಡುತ್ತಿದ್ದಾರೆ. ಹೀಗೆ ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿದು ಅಭ್ಯಾಸ ನಡೆಸುತ್ತಿರುವ ಚಿತ್ರಗಳನ್ನು ಬಿಸಿಸಿಐ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ವಿರಾಟ್ ಕೊಹ್ಲಿ ಕೂಡ ಬ್ಯಾಟ್ ಹಿಡಿದು ಅಭ್ಯಾಸ ನಡೆಸುತ್ತಿರುವ ಚಿತ್ರವಿದೆ. ಅದರ ಜತೆಗೆ ರೋಹಿತ್ ಶರ್ಮಾ ಸಲಹೆಗಳನ್ನು ಟೀಮ್ ಇಂಡಿಯಾದ ಇತರೆ ಆಟಗಾರರ ಜೊತೆ ವಿರಾಟ್ ಕೊಹ್ಲಿ ಆಲಿಸುತ್ತಿರುವ ಚಿತ್ರವೂ ಇದೆ. ಹೀಗೆ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಮೈದಾನಕ್ಕಿಳಿದು ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವುದು ಸದ್ಯ ಕ್ರಿಕೆಟ್ ಜಗತ್ತಿನ ಟ್ರೆಂಡಿಂಗ್ ಸುದ್ದಿ ಆಗಿದೆ.
ಹಾಗೂ ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ತಮ್ಮ ನಾಯಕನನ್ನು ಈ ರೀತಿ ನೋಡಿದ ಕೆಲ ವಿರಾಟ್ ಕೊಹ್ಲಿ ಅಭಿಮಾನಿಗಳು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಮೊದಲ ಏಕದಿನ ಪಂದ್ಯಕ್ಕೆ ಪ್ರಕಟವಾಗಿರುವ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್-ಕೀಪರ್), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್
ವೆಸ್ಟ್ ಇಂಡೀಸ್ ತಂಡ: ಕೀರಾನ್ ಪೊಲಾರ್ಡ್ (ಸಿ), ಫ್ಯಾಬಿಯನ್ ಅಲೆನ್, ಎನ್ಕ್ರುಮಾ ಬೋನರ್, ಡ್ಯಾರೆನ್, ಬ್ರಾವೋ, ಶಮರ್ಹ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್ ಜೆಆರ್, ಹೇಡನ್ ವಾಲ್ಶ್.