ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಆಘಾತ: ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ದಿಢೀರ್ ಎಂದು ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಏಕದಿನ ನಾಯಕತ್ವದಿಂದ ವಜಾಗೊಂಡಿದ್ದ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ ದೀರ್ಘ ಸ್ವರೂಪದ ಕ್ರಿಕೆಟ್‌ಗೂ ರಾಜೀನಾಮೆ ಕೊಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅವರ DRS ನಿರ್ಧಾರದ ಬಗ್ಗೆ ಸ್ಟಂಪ್ ಮೈಕ್ ಮೂಲಕ ಆತಿಥೇಯ ಬ್ರಾಡ್‌ಕಾಸ್ಟರ್ ಸೂಪರ್‌ಸ್ಪೋರ್ಟ್ ವಿರುದ್ಧ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಸಹ ಆಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ, ಮೂರನೇ ಟೆಸ್ಟ್ ಪಂದ್ಯದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಭಾರತ ಕ್ರಿಕೆಟ್ ತಂಡವನ್ನು ಎಚ್ಚರಿಸಿದ್ದರು. ಇದ್ರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
''ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು 7 ವರ್ಷಗಳ ಕಾಲ ಪ್ರತಿದಿನ ಕಠಿಣ ಪರಿಶ್ರಮ ಪಟ್ಟಿದ್ದೇನೆ. ನನ್ನ ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಪ್ರತಿಯೊಂದು ವಿಷಯವೂ ಒಂದು ಹಂತದಲ್ಲಿ ಸ್ಥಗಿತಗೊಳ್ಳಬೇಕು. ಭಾರತದ ಟೆಸ್ಟ್ ಕ್ಯಾಪ್ಟನ್ ಆಗಿ ನನಗೆ ಈ ಸಂದರ್ಭ ಅಂತ್ಯ ಎಂದು ಭಾವಿಸುತ್ತೇನೆ. ಪ್ರಯಾಣದ ಉದ್ದಕ್ಕೂ ಅನೇಕ ಏರಿಳಿತಗಳು ಮತ್ತು ಕೆಲವು ಕುಸಿತಗಳು ಕಂಡಿವೆ. ಆದರೆ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ಇರಲಿಲ್ಲ. ನಾನು ಯಾವಾಗಲೂ ನನ್ನ 120 ಪ್ರತಿಶತದಷ್ಟು ಎಲ್ಲದರಲ್ಲೂ ನೀಡುತ್ತೇನೆ ಎಂದು ನಂಬಿದ್ದೇನೆ. ಹಾಗೆ ಮಾಡಿದ್ದೇನೆ. ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಸರಿಯಾದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನನ್ನ ಹೃದಯದಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ. ನನ್ನ ತಂಡಕ್ಕೆ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ. ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟ ಬಿಸಿಸಿಐ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ನನ್ನಲ್ಲಿ ನಾಯಕತ್ವದ ಗುಣವಿದೆ ಎಂದು ಗುರುತಿಸಿ ದೊಡ್ಡ ಜವಬ್ದಾರಿವಹಿಸಿದ ಮಹೇಂದ್ರ ಸಿಂಗ್ ಧೋನಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ಘೋಷಣೆ ವೇಳೆ ತಿಳಿಸಿದ್ದಾರೆ.
ವಿರಾಟ್ ತಮ್ಮ ರಾಜೀನಾಮೆ ಘೋಷಣೆ ವೇಳೆಯಲ್ಲಿ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಅವರಿಗೆ ಧನ್ಯವಾದ ಹೇಳಿರುವುದು ವಿಶೇಷವಾಗಿದೆ. ಇವರ ಅಡಿಯಲ್ಲಿ ಭಾರತ ತಂಡ ಪ್ರಬಲ ಶಕ್ತಿಯಾಗಿ ಬೆಳೆಯಿತು ಮತ್ತು ತವರಿನಲ್ಲಿ ಬಲಿಷ್ಠವಾಗಿ ಪ್ರಾಬಲ್ಯಗೊಂಡಿತು ಎಂದು ಬರೆದಿದ್ದಾರೆ.
2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್ ಧೋನಿ ಸರಣಿ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಈ ವೇಳೆ ಒಲಿದು ಬಂದ ನಾಯಕತ್ವವನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಬೆಸ್ಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ 68 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿದ್ದು, ಇದರಲ್ಲಿ ಭಾರತ 40 ಪಂದ್ಯಗಳನ್ನ ಗೆದ್ದಿದ್ದು, 17 ಪಂದ್ಯಗಳಲ್ಲಿ ಸೋತಿದೆ ಮತ್ತು 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಭಾರತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಶೇಕಡಾ 58.82ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಭಾರತ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕನಾಗಿರುವ ವಿರಾಟ್ ಕೊಹ್ಲಿ, ವಿಶ್ವದಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಬೆಸ್ಟ್ ಕ್ಯಾಪ್ಟನ್ ರಿಕಿ ಪಾಂಟಿಂಗ್, ಸ್ಟೀವ್ ವ್ಹಾ ನಂತರದಲ್ಲಿ ಅತಿ ಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಂತೆಯೇ , ಕೂ ಅಪ್ಲಿಕೇಶನ್ ಮೂಲಕ ತಮ್ಮ ನಿವೃತ್ತಿ ಸಂದೇಶವನ್ನ ಹರಿಬಿಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications