ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಡಿಸೆಂಬರ್ 26ರಿಂದ ಆರಂಭವಾಗಲಿರುವ ಈ ಪಂದ್ಯದ ಗೆಲುವಿನ ಮೇಲೆ ಎರಡೂ ತಂಡಗಳು ಕಣ್ಣಿಟ್ಟಿವೆ. ಮೂರು ಟೆಸ್ಟ್ ಪಂದ್ಯಗಳ ಬಳಿಕ ಸರಣಿಯು 1-1ರಲ್ಲಿ ಸಮಬಲದಲ್ಲಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ನಂತರ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು. ಇದೀಗ ಮೆಲ್ಬೋರ್ನ್‌ನಲ್ಲಿ ಮಹತ್ವದ ಟೆಸ್ಟ್ ಪಂದ್ಯ ನಡೆಯಲಿದೆ.
ಉಭಯ ತಂಡಗಳು ಮೆಲ್ಬೋರ್ನ್ ಟೆಸ್ಟ್ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವತ್ತ ದೃಷ್ಟಿ ನೆಟ್ಟಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳುವ ಸನಿಹದಲ್ಲಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮೆಲ್ಬೋರ್ನ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು 10 ಪಂದ್ಯಗಳಲ್ಲಿ 44.9 ಸರಾಸರಿಯಲ್ಲಿ 449 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದೀಗ ಸಚಿನ್ ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ ಒಂದು ಬಿಗ್ ಇನ್ನಿಂಗ್ಸ್ ಆಡಬೇಕಾಗಿದೆ.
ಮೆಲ್ಬೋರ್ನ್ ಅಂಗಳದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಕೆಲ ಹಾಕಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಆರು ಪಂದ್ಯಗಳಲ್ಲಿ 52.7 ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ. ಕೊಹ್ಲಿ ಕೂಡ ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ 134 ರನ್ ಗಳಿಸಬೇಕು. ಇನ್ನೂ ಎರಡನೇ ಸ್ಥಾನದಲ್ಲಿರುವ ರಹಾನೆ ಅವರನ್ನು ಹಿಂದಿಕ್ಕಲು ಕೊಹ್ಲಿ 54 ರನ್ ಗಳಿಸಬೇಕಿದೆ.
ಅಜಿಂಕ್ಯ ರಹಾನೆ ಅವರು ಮೆಲ್ಬೋರ್ನ್‌ನಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 73.8 ರ ಸರಾಸರಿಯಲ್ಲಿ 369 ರನ್ ಬಾರಿಸಿದ್ದಾರೆ. ಅಲ್ಲದೆ ಎರಡು ಟೆಸ್ಟ್ ಶತಕಗಳನ್ನು ಗಳಿಸಿದರು. ಕಳೆದ ಬಾರಿ ಮೆಲ್ಬೋರ್ನ್‌ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿದ್ದ ಅವರು ಶತಕ ಬಾರಿಸಿದ್ದರು.
ವೀರೇಂದ್ರ ಸೆಹ್ವಾಗ್ ಕೂಡ ನಾಲ್ಕು ಟೆಸ್ಟ್ ಪಂದ್ಯಗಳಿಂದ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 280 ರನ್ ಗಳಿಸಿದ್ದಾರೆ. ಮತ್ತೊಂದೆಡೆ ರಾಹುಲ್ ದ್ರಾವಿಡ್ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ಅರ್ಧ ಶತಕಗಳನ್ನು ಒಳಗೊಂಡಂತೆ 263 ರನ್ ಹೊಂದಿದ್ದಾರೆ.