ಭಾರತ ಕ್ರಿಕೆಟ್ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರಿಕೆಟಿಗರಾಗಿರದಿದ್ದರೆ, ಬೇರೆ ಕ್ರೀಡಾಪಟು ಆಗಿರುತ್ತಿದ್ದರು ಎಂದು ತಮ್ಮ ಸಹ ಆಟಗಾರನಿಗೆ ಪರ್ಯಾಯ ವೃತ್ತಿಜೀವನ ಸೂಚಿಸಿದ್ದಾರೆ.
ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಕ್ರಿಕೆಟಿಗನಾಗಿರುವ ವಿರಾಟ್ ಕೊಹ್ಲಿ ಕುಸ್ತಿಯನ್ನು ಪರ್ಯಾಯ ವೃತ್ತಿಯಾಗಿ ತೆಗೆದುಕೊಳ್ಳಬಹುದಿತ್ತು ಎಂದು ಭುವನೇಶ್ವರ್ ಕುಮಾರ್ ಹಾಸ್ಯಮಯವಾಗಿ ತಿಳಿಸಿದರು.
ಇತ್ತೀಚಿಗೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. 34 ವರ್ಷದ ಕೊಹ್ಲಿ ಮುಂಬರುವ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಆಟಕ್ಕೆ ಮರಳಲಿದ್ದಾರೆ.

ಮುಂಬರುವ 2023ರ ಏಷ್ಯಾ ಕಪ್ ಮತ್ತು 2023ರ ಏಕದಿನ ವಿಶ್ವಕಪ್ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಟ್ರೋಫಿ ಗೆಲ್ಲುವ ಭಾರತ ತಂಡದ ಭರವಸೆಯಲ್ಲಿ ವಿರಾಟ್ ಕೊಹ್ಲಿಯ ಫಾರ್ಮ್ ಪ್ರಮುಖ ಪಾತ್ರ ವಹಿಸಲಿದೆ.
ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಬೌಲರ್ ಎಂದು ಭಾವಿಸುತ್ತಾರೆ; ಭುವನೇಶ್ವರ್ ಕುಮಾರ್
ಸೋಮವಾರ, ಆಗಸ್ಟ್ 21ರಂದು ಮುಂಬೈನಲ್ಲಿ ನಡೆದ ಸಿಯೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾರತೀಯ ವೇಗದ ಬೌಲರ್ ಭುವನೇಶ್ವರ್ ಕುಮಾರ್, ವಿರಾಟ್ ಕೊಹ್ಲಿ ಅವರು ಕ್ರಿಕೆಟಿಗನಾಗಿರದಿದ್ದರೆ ಕುಸ್ತಿಪಟು (WWE) ಆಗುತ್ತಿದ್ದರು ಎಂದು ಬಹಿರಂಗಪಡಿಸಿದರು.
ಇನ್ನು ಭುವನೇಶ್ವರ್ ಕುಮಾರ್ ಅವರು ವಿರಾಟ್ ಕೊಹ್ಲಿಯ ಬೌಲಿಂಗ್ ಆಕ್ಷನ್ ಬಗ್ಗೆ ಲೇವಡಿ ಮಾಡಿದ್ದು, ತಂಡದ ಇತರ ಸದಸ್ಯರು ಅವರ ವಿಶಿಷ್ಟವಾದ ಆಕ್ಷನ್‌ನಿಂದಾಗಿ ಗಾಯಗೊಳ್ಳಬಹುದು ಎಂದು ಭಯಪಡುತ್ತಾರೆ ಎಂದು ಹೇಳಿದರು.

"ವಿರಾಟ್ ಕೊಹ್ಲಿ ತನ್ನನ್ನು ತಾನು ತಂಡದ ಅತ್ಯುತ್ತಮ ಬೌಲರ್ ಎಂದು ಭಾವಿಸಿದ್ದಾರೆ. ಅವರು ಬೌಲಿಂಗ್ ಮಾಡುವಾಗ ನಾವು ಯಾವಾಗಲೂ ಭಯಪಡುತ್ತೇವೆ. ಏಕೆಂದರೆ ಅವರ ಬೌಲಿಂಗ್ ಆಕ್ಷನ್‌ನಿಂದಾಗಿ ಅವರು ಗಾಯಗೊಳ್ಳಬಹುದು," ಎಂದು ಭುವನೇಶ್ವರ್ ಕುಮಾರ್ ತಿಳಿಸಿದರು.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 46 ಶತಕಗಳನ್ನು ಬಾರಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ (49) ಅತಿ ಹೆಚ್ಚು ಏಕದಿನ ಶತಕಗಳ ದಾಖಲೆಯನ್ನು ಮೀರಿಸಲು ಕೇವಲ ನಾಲ್ಕು ಶತಕಗಳ ದೂರದಲ್ಲಿದ್ದಾರೆ. ಹಾಲಿ ಕ್ರಿಕೆಟಿಗ ಕೊಹ್ಲಿ ಈ ವರ್ಷಾಂತ್ಯದ ವೇಳೆಗೆ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.
ಸೋಮವಾರ, ಆಗಸ್ಟ್ 21ರಂದು ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಅರೆಕಾಲಿಕ ಬೌಲಿಂಗ್ ಆಯ್ಕೆಗಳ ಬಗ್ಗೆ ಚುರುಕಾದ ಉತ್ತರವನ್ನು ನೀಡಿದರು. ಅಗತ್ಯಬಿದ್ದರೆ ನಾನು ಮತ್ತು ವಿರಾಟ್ ಕೊಹ್ಲಿ ಬೌಲಿಂಗ್ ಮಾಡಬಹುದು ಎಂದು ಹೇಳಿದರು.
2023ರ ಏಷ್ಯಾ ಕಪ್ ಪಂದ್ಯಾವಳಿಯ 16ನೇ ಆವೃತ್ತಿಯು ಇದೇ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ ತಂಡಗಳು ಭಾಗವಹಿಸಲಿವೆ.
ಆ ಬಳಿಕ ತವರಿನಲ್ಲಿಯೇ ನಡೆಯುವ 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಅಕ್ಟೋಬರ್ 8ರ ಭಾನುವಾರದಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತವು 2023ರ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.