ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇಂದು (ನ.5) ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟ ವಿರಾಟ್ ಅವರಿಗೆ ಶುಭಾಶಯಗಳ ಮಹಾಪೋರವೇ ಹರಿದು ಬಂದಿದೆ. ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ನಲ್ಲಿ ನಿರ್ಮಿಸಿದ ಅಳಿಸಲಾಗದ ದಾಖಲೆಯ ಪಟ್ಟಿ ಇಲ್ಲಿದೆ.
1- ನಾಯಕನಾಗಿ ವಿರಾಟ್ ಕೊಹ್ಲಿ ಅಮೋಘ ರೆಕಾರ್ಡ್ ಹೊಂದಿದ್ದಾರೆ. ಇವರು ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವಿನ ನಗೆ ಬೀರಿದ ಮೊದಲ ಏಷ್ಯಾ ಖಂಡದ ನಾಯಕ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಅಲ್ಲದೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸರಣಿ ಗೆದ್ದು ಬೀಗಿದ್ದಾರೆ.
2- ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 15000 ರನ್ ಕಲೆ ಹಾಕಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಇವರು 2017ರಲ್ಲಿ ಶ್ರೀಲಂಕಾ ವಿರುದ್ಧ ನಿರ್ಮಿಸಿದ್ದಾರೆ.

3- ಏಕದಿನ ಫಾರ್ಮೆಟ್‌ನಲ್ಲಿ ವಿರಾಟ್ ಕೊಹ್ಲಿ ವೇಗವಾಗಿ 10 ಸಾವಿರ ರನ್ ಕಲೆ ಹಾಕಿದ ದಾಖಲೆಯನ್ನು ಹೊಂದಿದ್ದಾರೆ. ಇವರು 2018ರಲ್ಲಿ ಈ ದಾಖಲೆ ಬರೆದಿದ್ದಾರೆ.
4- ಟಿ20 ಕ್ರಿಕೆಟ್‌ನಲ್ಲೂ ವಿರಾಟ್ ತಮ್ಮ ಬ್ಯಾಟಿಂಗ್ ಖದರ್ ನೀಡಿದ್ದಾರೆ. ಇವರು ಆಡಿದ 125 ಪಂದ್ಯಗಳಲ್ಲಿ 4188 ರನ್ ಸೇರಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲೂ ಇವರು ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು 18 ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಒಂದೇ ಫ್ರಾಂಚೈಸಿ ಪರ ಆಡಿದ್ದಾರೆ. ಅಲ್ಲದೆ 8661 ರನ್ ಸಿಡಿಸಿದ್ದಾರೆ. ಈ ವೇಳೆ 8 ಶತಕ ಹಾಗೂ 63 ಅರ್ಧಶತಕಗಳನ್ನು ಬಾರಿಸಿದ್ದಾರೆ.
5- ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ರನ್‌ಗಳನ್ನು ಚೇಸ್ ಮಾಡುವಾಗ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಅಲ್ಲದೆ ಭಾರತದ ಪರ ವೇಗವಾಗಿ ಶತಕ ಬಾರಿಸಿದ ಹಿರಿಮೆ ಸಹ ಇವರದ್ದಾಗಿದೆ. ಇವರು 52 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು.

6- ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ 243 ರನ್ ಬಾರಿಸಿದ ಹಿರಿಮೆ ಸಹ ಇವರದ್ದಾಗಿದೆ. ಈ ಸಾಧನೆಯನ್ನು ವಿರಾಟ್ 2017ರಲ್ಲಿ ಶ್ರೀಲಂಕಾ ವಿರುದ್ಧ ಮಾಡಿದ್ದರು. ಇನ್ನು ಟೆಸ್ಟ್ ತಂಡದ ನಾಯಕತ್ವ ಪಡೆದ ಬಳಿಕ ವಿರಾಟ್ ಆಡಿದ ಮೊದಲ ಮೂರು ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
7- ವಿರಾಟ್ ಕೊಹ್ಲಿ ಒಂದೇ ವರ್ಷದಲ್ಲಿ ಐಸಿಸಿ ನೀಡುವ ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇವರು ವರ್ಷದ ಕ್ರಿಕೆಟ್ ಆಟಗಾರ, ವರ್ಷದ ಟೆಸ್ಟ್ ಆಟಗಾರ, ವರ್ಷದ ಏಕದಿನ ಕ್ರಿಕೆಟ್ ಬ್ಯಾಟರ್ ಎಂಬ ಹಿರಿಮೆ ಪಡೆದಿದ್ದಾರೆ.
8- ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್‌ಗಳಲ್ಲಿ ಬ್ಯಾಟ್ ಮಾಡಿ 50ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಇದು ಸಹ ಒಂದು ದಾಖಲೆ.
9- ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇವರು ಆಡಿದ 305 ಇನಿಂಗ್ಸ್‌ಗಳಲ್ಲಿ 51 ಶತಕ ಸಿಡಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಫಾರ್ಮೆಟ್‌ನಲ್ಲಿ ಇದು ಸಹ ದೊಡ್ಡ ದಾಖಲೆ.
10- ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27 ಸಾವಿರ ರನ್ ಕಲೆ ಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇವರು ಆಡಿದ 594 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದೇ ಸಾಧನೆಯನ್ನು ಸಚಿನ್ ಮಾಡಲು 623 ಇನಿಂಗ್ಸ್ ತೆಗೆದುಕೊಂಡಿದ್ದರು.