ವಿಶ್ವ ಕ್ರಿಕೆಟ್‌ನ ಅಭಿಮಾನಿಗಳು ವಿಶ್ವಕಪ್ ಟೂರ್ನಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಮೆಗಾ ಟೂರ್ನಿಗೂ ಮುನ್ನ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು ಅದ್ಭುತ ಪ್ರದರ್ಶನ ನೀಡಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾ ಏಕದಿನ ತಂಡದ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಉಳಿದಿಕೊಳ್ಳಲು ಹರಸಾಹಸ ಪಡುತ್ತಿರುವ ಆಟಗಾರನ ಬಗ್ಗೆ ಮಾತನಾಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಈ ಆಟಗಾರನನ್ನು ಸೆಹ್ವಾಗ್ ಆತ ಗೇಮ್ ಚೇಂಜರ್ ಎಂದು ಬಣ್ಣಿಸಿದ್ದು ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯಹೊಂದಿರುವ ಆಟಗಾರ ಎಂದು ಬಣ್ಣಿಸಿದ್ದಾರೆ. ಹಾಗಾದರೆ ಸೆಹ್ವಾಗ್ ಹೇಳಿರುವ ಆ ಆಟಗಾರ ಯಾರು? ಸೆಹ್ವಾಗ್ ಹೇಳಿಕೆಯ ಹಿಂದಿನ ಮರ್ಮವೇನು? ಮುಂದೆ ಓದಿ..

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಮೊಹಮ್ಮದ್ ಶನಿ ಅವರ ಅದ್ಭುತ ಐದು ವಿಕೆಟ್‌ಗಳ ಗೊಂಚಲಿನ ಪ್ರದರ್ಶನದ ನೀಡಿದ್ದಯ ಬ್ಯಾಟಿಂಗ್‌ನಲ್ಲಿ ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಿ ಅರ್ಧ ಶತಕದ ಕೊಡುಗೆ ನೀಡಿದರು. ಅದರಲ್ಲೂ ಟಿ20 ಮಾದರಿಯಲ್ಲಿ ನಂಬರ್1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಪ್ರದರ್ಶಿಸಿದ ಸಂವೇದನಾತ್ಮಕ ಬ್ಯಾಟಿಂಗ್ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚಿಗೆ ವ್ಯಕ್ತವಾಗಿದೆ. ಸೆಹ್ವಾಗ್ ಕೂಡ ಈ ಪ್ರದರ್ಶನವನ್ನೇ ಉಲ್ಲೇಖಿಸಿ ತಮ್ಮ ಟ್ವೀಟ್ ಮಾಡಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಸೆಹ್ವಾಗ್ ಟ್ವೀಟ್ ಮಾಡಿ ಸೂರ್ಯಕುಮಾರ್ ಯಾದವ್ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಈತ ಖಂಡಿತವಾಗಿಯೂ ಭಾರತ ತಂಡಕ್ಕೆ ಎಕ್ಸ್‌ಫ್ಯಾಕ್ಟರ್ ಎನಿಸಬಲ್ಲ ಆಟಗಾರ ಎಂದಿದ್ದಾರೆ. ಎದುರಾಳಿಗಳಲ್ಲಿ ನಡುಕ ಹುಟ್ಟಿಸಬಲ್ಲ ಈತ ತಂಡಕ್ಕೆ ಖಂಡಿತವಾಗಿಯೂ ಆಸ್ತಿಯಾಗುವಂತಾ ಕ್ರಿಕೆಟಿಗ ಎಂದು ಬಣ್ಣಿಸಿದ್ದಾರೆ.
"ಸೂರ್ಯಕುಮಾರ್ ಪ್ರದರ್ಶನಕ್ಕೆ ನಾನು ಬಹಳ ಸಂತೋಷಗೊಂಡಿದ್ದೇನೆ. ಆತ ನಿಜಕ್ಕೂ ಎಕ್ಸ್‌ಫ್ಯಾಕ್ಟರ್. ಆತ ಆಡುವ ಲಯದಲ್ಲಿ ಆಡಲು ಹೆಚ್ಚಿನ ಕ್ರಿಕೆಟಿಗರಿಗೆ ಸಾಧ್ಯವಾಗುವುದಿಲ್ಲ. ಆತನ ಆಟದಿಂದಾಗಿ ಎದುರಾಳಿಗಳಲ್ಲಿ ಭಯ ಹುಟ್ಟಿಸುವ ಸಾಮರ್ಥ್ಯ ಆತನಲ್ಲಿ ಖಂಡಿತವಾಗಿಯೂ ಇದೆ. ಆತನೊಂದಿಗೆ ನಾವು ಮುಂದುವರಿದಿರುವುದು ಅದ್ಭುತವಾದ ಸಂಗತಿ ಹಾಗೂ ಆತ ತಂಡಕ್ಕೆ ಆಸ್ತಿಯಾಗಬಲ್ಲ. ಅಭಿನಂದನೆಗಳು ಭಾರತ" ಎಂದು ವೀರೇಂದ್ರ ಸೆಹ್ವಾಗ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳಲ್ಲಿ ನಡುಕಹುಟ್ಟಿಸಿರುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ರನ್ ಗಳಿಸಲು ಸತತವಾಗಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಂದರ್ಭೋಚಿತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದು ಅರ್ಧ ಶತಕವನ್ನು ಕೂಡ ಸಿಡಿಸಿದ್ದಾರೆ. ಅಲ್ಲದೆ 5ನೇ ವಿಕೆಟ್‌ಗೆ ಕೆಎಲ್ ರಾಹುಲ್ ಜೊತೆ ಸೇರಿಕೊಂಡು 80 ರನ್‌ಗಳ ಜೊತೆಯಾಟವನ್ನು ಆಡಿದ್ದು ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಪ್ರದರ್ಶನದ ಮೂಲಕ ಏಕದಿನ ಮಾದರಿಯಲ್ಲಿ ಸೂರ್ಯ ಮತ್ತೆ ಫಾರ್ಮ್ ಕಂಡಿಕೊಂಡಿದ್ದಾರೆ.