ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿಯೇ ನಡೆಯಲಿದೆ. ಇದಕ್ಕಾಗಿ ಭಾರತ ಸೇರಿದಂತೆ ಎಲ್ಲಾ ಹತ್ತು ತಂಡಗಳೂ ಇನ್ನಿಲ್ಲದ ತಯಾರಿ ಆರಂಭಿಸಿವೆ.
2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಕೊನೆಯ ಬಾರಿಗೆ ತವರಿನಲ್ಲಿ ಆಡಿದಾಗ ಗೆದ್ದಿತ್ತು. ಇದೀಗ ಮತ್ತೆ ವಿಶ್ವಕಪ್ ಟ್ರೋಫಿ ಗೆಲ್ಲಲು ಭಾರತೀಯ ತಂಡ ಎದುರು ನೋಡುತ್ತಿದೆ.

ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲಿದ್ದಾರೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.
ಭಾರತ ತಂಡವು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಬಳಿಕ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿಯ ಹೈ-ವೋಲ್ಟೇಜ್ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಭಾರತದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಿರುವುದರಿಂದ ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಮಿಂಚಲು ಹಲವು ಅವಕಾಶಗಳನ್ನು ಹೊಂದಿರುತ್ತಾರೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
ಐಸಿಸಿಯ ಇನ್‌ಸ್ಟಾಗ್ರಾಮ್ ಖಾತೆಯ ವಿಡಿಯೋದಲ್ಲಿ, 2023ರ ವಿಶ್ವಕಪ್‌ನಲ್ಲಿ ಯಾರು ಹೆಚ್ಚು ರನ್ ಗಳಿಸುತ್ತಾರೆ ಎಂದು ಊಹಿಸಲು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರನ್ನು ಕೇಳಲಾಯಿತು. ಅವರು ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದರು.
"ಭಾರತ ಉತ್ತಮ ಪಿಚ್‌ಗಳನ್ನು ಹೊಂದಿದೆ. ಆದ್ದರಿಂದ, ಆರಂಭಿಕ ಆಟಗಾರನಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ನಾನು ಭಾವಿಸುತ್ತೇನೆ. ನಾನು ಒಬ್ಬರನ್ನು ಆಯ್ಕೆ ಮಾಡಲು ಬಯಸಿದರೆ, ರೋಹಿತ್ ಶರ್ಮಾ ಎಂದು ನಾನು ಭಾವಿಸುತ್ತೇನೆ. ಒಂದೆರಡು ಹೆಸರುಗಳಿವೆ, ಆದರೆ ನಾನು ಭಾರತೀಯನನ್ನು ಆಯ್ಕೆ ಮಾಡುತ್ತೇನೆ," ಎಂದು ರೋಹಿತ್ ಶರ್ಮಾ ಹೆಸರು ಹೇಳಿದರು.
ಇದೇ ವೇಳೆ ಭಾರತದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾರನ್ನು ಶ್ಲಾಘಿಸಿದರು ಮತ್ತು ವಿಶ್ವಕಪ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನಗಳನ್ನು ಸೆಹ್ವಾಗ್ ವಿವರಿಸಿದರು.
"ವಿಶ್ವಕಪ್‌ಗೆ ಬಂದಾಗ ರೋಹಿತ್ ಶರ್ಮಾ ಶಕ್ತಿಯ ಮಟ್ಟ ಮತ್ತು ಅವರ ಪ್ರದರ್ಶನವು ಹೆಚ್ಚಾಗುತ್ತದೆ. ಹಾಗಾಗಿ ಆತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ಬಾರಿ ರೋಹಿತ್ ಶರ್ಮಾ ನಾಯಕನೂ ಆಗಿದ್ದಾರೆ. ಅವರು ಪಂದ್ಯಾವಳಿಯಲ್ಲಿ ವ್ಯತ್ಯಾಸ ಮಾಡಲಿದ್ದಾರೆ ಮತ್ತು ಹೆಚ್ಚಿನ ಸ್ಕೋರ್ ಮಾಡುತ್ತಾರೆ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.
ಇಂಗ್ಲೆಂಡ್‌ನಲ್ಲಿ ನಡೆದ 2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಆಡಿದ ಒಂಬತ್ತು ಪಂದ್ಯಗಳಲ್ಲಿ ಐದು ಶತಕಗಳನ್ನು ಒಳಗೊಂಡಂತೆ 81ರ ಸರಾಸರಿಯಲ್ಲಿ 648 ರನ್ ಗಳಿಸಿದ್ದರು.
36 ವರ್ಷದ ರೋಹಿತ್ ಶರ್ಮಾ ಒಟ್ಟಾರೆ 244 ಏಕದಿನ ಪಂದ್ಯಗಳಲ್ಲಿ 48.69ರ ಸರಾಸರಿಯಲ್ಲಿ 30 ಶತಕ ಮತ್ತು 48 ಅರ್ಧಶತಕಗಳೊಂದಿಗೆ 9837 ರನ್ ಬಾರಿಸಿದ್ದಾರೆ.
ಈ ವರ್ಷ ರೋಹಿತ್ ಶರ್ಮಾ ಎಲ್ಲಾ ರೀತಿಯ ಆಟಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ರೋಹಿತ್ ಶರ್ಮಾ ಈ ವರ್ಷ ಆಟದ ಎಲ್ಲಾ ಸ್ವರೂಪಗಳಲ್ಲಿ 16 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 48.57ರ ಸರಾಸರಿಯಲ್ಲಿ 923 ರನ್ ಗಳಿಸಿದ್ದಾರೆ.