Virender Sehwag: ಮಗನಿಗಾಗಿ ಸಿಎಸ್‌ಕೆ ವಿರುದ್ಧ ಶತಕ ಸಿಡಿಸಿದ್ದ ವಿಚಾರ ಹಂಚಿಕೊಂಡ ಸೆಹ್ವಾಗ್
ಐಪಿಎಲ್‌ನಲ್ಲಿ ಮಗನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ ಸಿಡಿಸಿದ್ದೆ ಎಂದು ಮಾಜಿ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದ ಪರವಾಗಿ ಆಡುತ್ತಿದ್ದ ಅವರು 2014ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು.
2014ರ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅದ್ಭುತವಾದ ಪ್ರದರ್ಶನವನ್ನು ನೀಡಿತ್ತು. ಆ ಆವೃತ್ತಿಯಲ್ಲಿ ಅವರು ಫೈನಲ್ ಕೂಡ ಪ್ರವೇಶಿಸಿದ್ದರು, ಆದರೆ ಫೈನಲ್‌ನಲ್ಲಿ ಕೆಕೆಆರ್ ವಿರುದ್ಧ ಸೋಲುವ ಮೂಲಕ ಮೊದಲ ಕಪ್ ಗೆಲ್ಲುವಲ್ಲಿ ವಿಫಲವಾದರು. ಆದರೂ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಲೀಗ್ ಹಂತದ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಸ್ಫೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಸಿಎಸ್‌ಕೆ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರಿಸಿದ್ದರು. ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್‌ಗಳನ್ನು ಕಲೆಹಾಕಿತ್ತು.

ಸ್ಫೋಟಕ ಶತಕ ಸಿಡಿಸಿದ್ದ ಸೆಹ್ವಾಗ್
ಆರಂಭಿಕರಾಗಿ ಕಣಕ್ಕಿಳಿದ ಸೆಹ್ವಾಗ್ ಮೊದಲ ಓವರ್ ನಿಂದಲೇ ಅಬ್ಬರಿಸಲು ಆರಂಭಿಸಿದರು. ಮೊದಲ ಓವರ್ ನಿಂದ 18ನೇ ಓವರ್ ವರೆಗೂ ಅವರು ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಗಳ ಬೆವರಿಳಿಸಿದರು. 58 ಎಸೆತಗಳಲ್ಲಿ 12 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿದರು. 210.34 ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಿದ್ದರು.
ಈ ಮೊತ್ತವನ್ನು ಬೆನ್ನತ್ತಿದ ಸಿಎಸ್‌ಕೆ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ ಗಳಿಸುವ ಮೂಲಕ 24 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಸುರೇಶ್ ರೈನಾ 25 ಎಸೆತಗಳಲ್ಲಿ 12 ಬೌಂಡರಿ 6 ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದ್ದರು ಆದರೂ ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರಿಂದ ಸಿಎಸ್‌ಕೆ ಸೋಲೊಪ್ಪಿಕೊಂಡಿತು.

ಮಗನಿಗಾಗಿ ಶತಕ ಸಿಡಿಸಿದ್ದ ಸೆಹ್ವಾಗ್
ಸಿಎಸ್‌ಕೆ ವಿರುದ್ಧ ಶತಕ ಸಿಡಿಸುವ ಮುನ್ನ ಮಗನ ಜೊತೆಗಿನ ಸಂಭಾಷಣೆಯನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರು 2014ರ ಐಪಿಎಲ್‌ನ ಶತಕದ ಬಗ್ಗೆ ಮಾತನಾಡಿದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ ಗಳಿಸಿದ್ದು ನನಗೆ ಅತ್ಯಂತ ಸ್ಮರಣೀಯ ಕ್ಷಣ. ಆ ಐಪಿಎಲ್ ಆವೃತ್ತಿಯಲ್ಲಿ ನಾನು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ, ನನ್ನ ಮಗ ನನ್ನ ಹತ್ತಿರ ಬಂದು, "ಅಪ್ಪಾ ನೀವು ರನ್ ಗಳಿಸದೇ ಇರುವುದಕ್ಕೆ ನನ್ನ ಸ್ನೇಹಿತರು ನನ್ನನ್ನು ರೇಗಿಸುತ್ತಾರೆ" ಎಂದು ಹೇಳಿದ, ನಾನು ಮಗನಿಗಾಗಿ ರನ್ ಗಳಿಸಲು ಬಯಸಿದ್ದೆ, ಆದರೆ ಅಂದು ಶತಕ ಸಿಡಿಸಿದೆ, ನನ್ನ ಮಗ ನನ್ನ ಆಟವನ್ನು ನೋಡಿ ತುಂಬಾ ಸಂತೋಷಪಟ್ಟನು ಎಂದು ಹೇಳಿದರು.
"ಸಿಎಸ್‌ಕೆ ಬಲಿಷ್ಠ ತಂಡ ಎಂದು ನನಗೆ ತಿಳಿದಿತ್ತು, ಆದರೆ ಅವರಂತಹ ದೊಡ್ಡ ತಂಡ ಮಾತ್ರವೇ ಗೆಲ್ಲಬೇಕು ಎಂದು ನಾವು ಅಂದುಕೊಂಡಿರಲಿಲ್ಲ, ಒಬ್ಬ ಸೆಹ್ವಾಗ್ 122 ರನ್ ಗಳಿಸಿದಾಗ, ನಮಗಿಂತ ಉತ್ತಮ ತಂಡವಾಗಿದ್ದರೂ ಅವರನ್ನು ಸೋಲಿಸಲು ಅದು ಸಾಕಾಗಿತ್ತು. ಇದೇ ಕ್ರಿಕೆಟ್‌ನ ಸೌಂದರ್ಯ, ವೈಯಕ್ತಿಕ ಪ್ರದರ್ಶನ ಉತ್ತಮವಾಗಿದ್ದರೆ ಕೆಲವೊಮ್ಮೆ ಏಕಾಂಗಿಯಾಗಿ ಎದುರಾಳಿಗಳನ್ನು ಸೋಲಿಸಬಹುದು" ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications