
ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಫೋಟಕ ಬ್ಯಾಟರ್ ಎಂದೇ ಪರಿಗಣಿಸಲಾಗುತ್ತಿದೆ. ವೀರೇಂದ್ರ ಸೆಹ್ವಾಗ್ ಅವರ ನಿವೃತ್ತಿಯಾದ ಹಲವು ವರ್ಷಗಳ ನಂತರವೂ 44 ವರ್ಷದ ಆಟಗಾರನ ಸಾಧನೆಗಳನ್ನು ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ.
ವೀರೇಂದ್ರ ಸೆಹ್ವಾಗ್ ಅವರು ಭಾರತದ ಪರ 104 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, 8586 ರನ್‌ಗಳನ್ನು ಬಾರಿಸಿದ್ದಾರೆ. ಇದೇ ವೇಳೆ ವೀರೇಂದ್ರ ಸೆಹ್ವಾಗ್ ಅವರ ಏಕದಿನ ಕ್ರಿಕೆಟ್ ಸಂಖ್ಯೆಗಳು ಆಕರ್ಷಕವಾಗಿವೆ. ಭಾರತ ಪರ ಆಡಿದ 251 ಏಕದಿನ ಪಂದ್ಯಗಳಲ್ಲಿ 8273 ರನ್ ಗಳಿಸಿದ್ದಾರೆ.
ಅವರು ಆಡುವ ಕಾಲದಲ್ಲಿ ಎದುರಾಳಿ ತಂಡದಲ್ಲಿ ಶೊಯೆಬ್ ಅಖ್ತರ್, ಗ್ಲೆನ್ ಮೆಕ್‌ಗ್ರಾತ್, ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್, ಬ್ರೆಟ್ ಲೀ ಅವರಂತಹ ದೈತ್ಯ ಬೌಲರ್‌ಗಳ ವಿರುದ್ಧ ಬ್ಯಾಟ್ ಬೀಸಿದ್ದರು.

ಆಧುನಿಕ ಕ್ರಿಕೆಟ್‌ನಲ್ಲಿ ಅಂದಿನ ಕೆಲವು ಆಟಗಾರರು ಈಗಿಲ್ಲ. ಕೆಲವು ಬ್ಯಾಟ್ಸ್‌ಮನ್‌ಗಳು ಅದೇ ರೀತಿಯ ಸ್ಫೋಟಕ ಆಟವನ್ನು ಆಡುವಾಗ ವೀರೇಂದ್ರ ಸೆಹ್ವಾಗ್ ಅವರ ಮಟ್ಟವನ್ನು ಪುನರಾವರ್ತಿಸಲು ಸಮರ್ಥರಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಚರ್ಚೆಯ ಬಗ್ಗೆ ವೀರೇಂದ್ರ ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ವೀರೇಂದ್ರ ಸೆಹ್ವಾಗ್ ಶೈಲಿಯನ್ನು ಹೋಲುವ ಆಟಗಾರರು ಇಲ್ಲದಿರುವುದರಿಂದ ಅವರ ಮತ್ತು ಆಧುನಿಕ ಬ್ಯಾಟರ್‌ಗಳ ನಡುವಿನ ಹೋಲಿಕೆಗಳು ಹಳೆಯದಾಗಿವೆ ಎಂದು ಸ್ವತಃ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಬ್ಯಾಟಿಂಗ್ ಶೈಲಿಗೆ ರಿಷಭ್ ಪಂತ್ ಸ್ವಲ್ಪ ಹತ್ತಿರವಾಗಿದ್ದಾರೆ: ವೀರೇಂದ್ರ ಸೆಹ್ವಾಗ್
ನ್ಯೂಸ್ 18 ಇಂಡಿಯಾ ಚೌಪಾಲ್ ಮಾತುಕತೆ ಸಮಯದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಇಂದಿನ ಬ್ಯಾಟರ್‌ಗಳೊಂದಿಗೆ ತಮ್ಮ ಹೋಲಿಕೆಗಳ ಬಗ್ಗೆ ಮಾತನಾಡಿದರು.
ಸದ್ಯ ಭಾರತ ತಂಡದಲ್ಲಿ ಪೃಥ್ವಿ ಶಾ ಮತ್ತು ರಿಷಭ್ ಪಂತ್ ಅವರನ್ನು ಒಂದೇ ರೀತಿಯ ಆಟದ ಶೈಲಿಯನ್ನು ಹೊಂದಿರುವ ಇಬ್ಬರು ಬ್ಯಾಟ್ಸ್‌ಮನ್‌ಗಳು ಎಂದು 44 ವರ್ಷದ ಅನುಭವಿ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರೆ.

ರಿಷಭ್ ಪಂತ್ ಮತ್ತು ಪೃಥ್ವಿ ಶಾ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಏರಿಕೆ ಕಂಡಿದ್ದಾರೆ. ರಿಷಭ್ ಪಂತ್ ರಾಷ್ಟ್ರೀಯ ತಂಡದ ಅವಿಭಾಜ್ಯ ಸದಸ್ಯನಾಗಿದ್ದರೂ, ಪೃಥ್ವಿ ಶಾ ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಪಡೆಯಲು ಇನ್ನೂ ಹೆಣಗಾಡುತ್ತಿದ್ದಾರೆ.
ನಿಸ್ಸಂದೇಹವಾಗಿ, ಈ ಇಬ್ಬರೂ ಆಟಗಾರರು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ ವೀರೇಂದ್ರ ಸೆಹ್ವಾಗ್ ಭಾರತ ತಂಡದೊಂದಿಗೆ ಸಾಧಿಸಿದ ಯಶಸ್ಸಿನ ಮಟ್ಟವನ್ನು ಸಾಧಿಸಲು ಇವರು ಇನ್ನೂ ಸಾಕಷ್ಟು ದೂರದಲ್ಲಿದ್ದಾರೆ.
"ಭಾರತ ತಂಡದಲ್ಲಿ ನನ್ನಂತೆ ಬ್ಯಾಟಿಂಗ್ ಮಾಡುವ ಆಟಗಾರರು ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಅದರ ಹತ್ತಿರ ಬಂದ ಇಬ್ಬರು ಆಟಗಾರರೆಂದರೆ ಪೃಥ್ವಿ ಶಾ ಮತ್ತು ರಿಷಭ್ ಪಂತ್,"ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
"ನನ್ನ ಪ್ರಕಾರ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಬ್ಯಾಟಿಂಗ್ ಮಾಡುತ್ತಿದ್ದುದಕ್ಕೆ ಸ್ವಲ್ಪ ಹತ್ತಿರವಾಗಿದ್ದಾರೆ. ಆದರೆ ಅವರು 90-100 ರನ್‌ಗಳಿಗೆ ತೃಪ್ತಿಪಟ್ಟಿದ್ದಾರೆ. ನಾನು 200, 250 ಮತ್ತು 300 ರನ್‌ಗಳನ್ನು ಗಳಿಸಿದ ನಂತರ ತೃಪ್ತಿ ಹೊಂದುತ್ತಿದ್ದೆ," ಎಂದಿದ್ದಾರೆ.
"ರಿಷಭ್ ಪಂತ್ ತಮ್ಮ ಆಟವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದರೆ, ಕ್ರಿಕೆಟ್ ಅಭಿಮಾನಿಗಳನ್ನು ಇನ್ನಷ್ಟು ರಂಜಿಸಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೇಳಿದರು.