ಮೆಲ್ಬೋರ್ನ್, ಮಾ. 03: ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಅವರಿಗೆ ಆಫರ್ ಬಂದಿತ್ತಂತೆ. ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರು ಹಸ್ಸಿ ಅವರ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದರು ಎಂಬ ಸುದ್ದಿ ಹೊರ ಬಂದಿದೆ. ಈ ವಿಷಯವನ್ನು ಹಸ್ಸಿ ಅವರೇ ತಮ್ಮ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಬಿಸಿಸಿಐನ ಸಲಹಾ ಸಮಿತಿ ಸದ್ಯಸ್ಯರಾಗುವುದಕ್ಕೂ ಮುನ್ನ ಐಪಿಎಲ್ ಪಂದ್ಯವೊಂದು ಮುಗಿದ ಬಳಿಕ ಲಕ್ಷ್ಮಣ್ ಅವರು ತಮ್ಮಲ್ಲಿ ಈ ಪ್ರಸ್ತಾಪವಿಟ್ಟಿದ್ದರು ಎಂದು ತಮ್ಮ 3ನೇ ಪುಸ್ತಕ 'ವಿನ್ನಿಂಗ್ ಎಡ್ಜ್'ನಲ್ಲಿ ಹಸ್ಸಿ ವಿವರಿಸಿದ್ದಾರೆ.
ಪ್ರಮುಖ ತಂಡಗಳ ಕೋಚ್ ಆಗುವುದೆಂದರೆ ಕುಟುಂಬದಿಂದ ಬಹುಕಾಲ ದೂರ ಉಳಿಯಬೇಕು ಕನಿಷ್ಠ 10 ತಿಂಗಳು ಆ ತಂಡದ ಜೊತೆಗೆ ಪ್ರವಾಸ ಕೈಗೊಳ್ಳಬೇಕು ಇದು ಸಾಧ್ಯವಿಲ್ಲದ ಮಾತು. ವೃತ್ತಿ ಬದುಕು ಮುಗಿದ ಬಳಿಕ ನನ್ನ ಕುಟುಂಬದ ಸಂತೋಷದಿಂದ ಕಾಲ ಕಳೆಯುವ ನಿರ್ಧಾರ ಮಾಡಿಕೊಂಡಿದ್ದೇನೆ. ಜೊತೆಗೆ ನನಗೆ ಪೂರ್ಣ ಪ್ರಮಾಣದ ಕೋಚ್ ಆಗುವ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ.