
ನವದೆಹಲಿ: ಬಹು ನಿರೀಕ್ಷಿತ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ. ಕೊಹ್ಲಿಯ ನಿರ್ಧಾರವನ್ನು ಒಂದಿಷ್ಟು ಮಂದಿ ಟೀಕಿಸಿದ್ದರೆ, ಬಹುತೇಕ ಕ್ರಿಕೆಟ್ ಪರಿಣಿತರು ಬೆಂಬಲಿಸಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಕೂಡ ಕೊಹ್ಲಿ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕೊಹ್ಲಿ ಪಡೆ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಈ ವೇಳೆ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ (ಡೇ-ನೈಟ್ ಟೆಸ್ಟ್) ಆಡಿದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.
ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಜನವರಿ ತಿಂಗಳಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಹೀಗಾಗಿ ಡಿಸೆಂಬರ್ 17ರಿಂದ ಆರಂಭಗೊಂಡು ಜನವರಿ 19ಕ್ಕೆ ಮುಗಿಯುವ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಕೊಹ್ಲಿಗೆ ಸಾಧ್ಯವಾಗುತ್ತಿಲ್ಲ. ಮೊದಲ ಟೆಸ್ಟ್ ಬಳಿಕ ಕೊಹ್ಲಿ ಪಿತೃತ್ವದ ರಜೆಯಲ್ಲಿರುವುದರಿಂದ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಿಕೊಳ್ಳಲಿದ್ದಾರೆ.
'ನೀವೆಲ್ಲ ಕೊಹ್ಲಿಯ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಹೌದು, ಅಂತಿಮವಾಗಿ ನೀವು ವೃತ್ತಿಪರ ಕ್ರಿಕೆಟರ್. ಆದರೆ ನೀವು ಕುಟುಂಬದ ಸದಸ್ಯ ಕೂಡ ಹೌದು. ನಿಮ್ಮ ಕುಟುಂಬಕ್ಕೆ ಒಳ್ಳೆದು ಯಾವುದೊ ಅದನ್ನು ನೀವು ಮಾಡುತ್ತೀರಿ. ಇದು ನಿಮ್ಮ ಬದುಕಿನ ಅಪೂರ್ಣ ಕ್ಷಣವಾದ್ದರಿಂದ ನೀವು ಕೊಹ್ಲಿ ನಿರ್ಧಾರ ಗೌರವಿಸುತ್ತೀರಿ ಎಂದು ಭಾವಿಸುತ್ತೇವೆ,' ಎಂದು ಎಐಎನ್‌ಎಸ್ ಜೊತೆ ಮಾತನಾಡಿದ ಲಕ್ಷ್ಮಣ್ ಹೇಳಿದ್ದಾರೆ.