ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್‌ಗೆ ಎದುರಾಯ್ತು ಅಚ್ಚರಿ!

ಬ್ರಿಸ್ಬೇನ್, ಮೇ 06: ಬಾಲ್ ಟ್ಯಾಂಪರಿಂಗ್‌ನಲ್ಲಿ ಸಿಕ್ಕಿಬಿದ್ದು 13 ತಿಂಗಳ ಸುದೀರ್ಘಾವಧಿಯ ನಿಷೇಧ ಶಿಕ್ಷೆಯ ವನವಾಸ ಅನುಭವಿಸಿ ಆಸ್ಟ್ರೇಲಿಯಾ ತಂಡದಲ್ಲಿ ಮರಳಿ ಸ್ಥಾನ ಪಡೆದುಕೊಂಡಿರುವ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಭಾರಿ ಅಚ್ಚರಿಯೊಂದು ಎದುರಾಗಿದೆ.
ಕ್ರಿಕೆಟ್ ಜಗತ್ತಿನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅಬ್ಬರಿಸಿ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಡೇವಿಡ್ ವಾರ್ನರ್‌ಗೆ ಇದೀಗ ಕಾಂಗರೂ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತೆ ಸೂಚಿಸಲಾಗಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಆಸ್ಟ್ರೇಲಿಯಾ ತಂಡದ ಈ ನಡೆ ವಾರ್ನರ್‌ಗೆ ಮಾತ್ರವಲ್ಲ ಇಡೀ ಕ್ರಿಕೆಟ್ ಜಗತ್ತಿಗೇ ಅಚ್ಚರಿ ತಂದೊಡ್ಡಿದೆ.
ಆಸ್ಟ್ರೇಲಿಯಾ ಇಲೆವೆನ್ ತಂಡ ಮೇ ಸೋಮವಾರ ನ್ಯೂಜಿಲೆಂಡ್ ಇಲೆವೆನ್ ತಂಡದ ವಿರುದ್ಧ ವಿಶ್ವಕಪ್ ಪೂರ್ವ ಸಿದ್ಧತೆಯ ಅನಧಿಕೃತ ಅಭ್ಯಾಸ ಪಂದ್ಯವನ್ನು ಆಡಿದ್ದು, ಈ ಪಂದ್ಯದಲ್ಲಿ ಡೇವಿಡ್ ವಾರ್ನರ್‌ಗೆ ಆರಂಭಿಕ ಸ್ಥಾನದ ಬದಲಾಗಿ 3ನೇ ಕ್ರಮಾಂಕದಲ್ಲಿ ಆಡಿದ್ದಾರೆ. ನಾಯಕ ಆರೊನ್ ಫಿಂಚ್ ಮತ್ತು ಎಡಗೈ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಇನಿಂಗ್ಸ್ ಆರಂಭಿಸಿದ್ದಾರೆ. ಇದರೊಂದಿಗೆ ವಿಶ್ವಕಪ್‌ನಲ್ಲಿ ವಾರ್ನರ್‌ಗೆ ಆರಂಭಿಕನ ಸ್ಥಾನ ಲಭ್ಯವಾಗುವುದು ಅನುಮಾನವಾಗಿದೆ.
ಪಂದ್ಯದಲ್ಲಿ ಆಸ್ಟ್ರೇಲಿಯಾ ಇಲೆವೆನ್ ತಂಡ ಕೇವಲ ಒಂದು ವಿಕೆಟ್ ಜಯ ದಾಖಲಿಸಿತು. 3ನೇ ಕ್ರಮಾಂಕದಲ್ಲಿ ಆಡಿದ ವಾರ್ನರ್ 43 ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿದರು. ಆರಂಭಿಕರ ಸ್ಥಾನದಲ್ಲಿ ಖವಾಜ (4) ವಿಫಲರಾದರೆ, ಫಿಂಚ್ 52 ರನ್‌ಗಳನ್ನು ಸಿಡಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರಿಸಿದ್ದ ವಾರ್ನರ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್, ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ 12 ಪಂದ್ಯಗಳಿಂದ 70ರ ಸರಾಸರಿಯಲ್ಲಿ692 ರನ್‌ಗಳನ್ನು ಚಚ್ಚಿದ್ದಾರೆ. ಆಂದಹಾಗೆ ಇಷ್ಟೂ ರನ್‌ಗಳನ್ನು ಅವರು ಗಳಿಸಿರುವುದು ಆರಂಭಿಕ ಬ್ಯಾಟ್ಸ್‌ಮನ್ ಆಗಿ. ರಾಷ್ಟ್ರೀಯ ತಂಡದ ಪರ ಮರಳಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವ ಉದ್ದೇಶದಿಂದಲೇ ಅವರು ರೈಸರ್ಸ್ ಪರ ಇನಿಂಗ್ಸ್ ಆರಂಭಿಸಿ ರನ್ ಹೊಳೆ ಹರಿಸಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾದ ಲೆಕ್ಕಾಚಾರ
ಆಸ್ಟ್ರೇಲಿಯಾ ತಂಡದ ಪರ ಮತ್ತೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವುದು ಡೇವಿಡ್ ವಾರ್ನರ್ ಅವರ ತುಡಿತವಾದರೆ, ಕ್ರಿಕೆಟ್ ಆಸ್ಟ್ರೇಲಿಯಾದ ಲೆಕ್ಕಾಚಾರವೇ ಬೇರೆಯದ್ದೇ ಆಗಿದೆ. ಭಾರತ ಮತ್ತು ಪಾಕಿಸ್ತಾನ ವಿರುದ್ಧ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಯಶಸ್ಸಿನ ಅಲೆಯಲ್ಲಿ ಮುನ್ನಡೆಸಿದ ಆರಂಭಕಾರರಾದ ಆರೊನ್ ಫಿಂಚ್ ಮತ್ತು ಉಸ್ಮಾನ್ ಖವಾಜಾ ಅವರನ್ನೇ ಮುಂದುವರಿಸುವುದು ಕ್ರಿಕೆಟ್ ಆಸ್ಟ್ರೇಲಿಯಾದ ತಂತ್ರ. ಭಾರತ ಮತ್ತು ಪಾಕಿಸ್ತಾನ ವಿರುದ್ಧ ಈ ಜೋಡಿ ಒಟ್ಟು 10 ಬಾರಿ ಕಣಕ್ಕಿಳಿದಿದ್ದು, 193, 209 ಮತ್ತು 134 ರನ್‌ಗಳ ಶ್ರೇಷ್ಠ ಆರಂಭಿಕ ಜತೆಯಾಟ ನೀಡಿ ಗಮನ ಸೆಳೆದಿದೆ. ಹೀಗಾಗಿ ಇದರಲ್ಲಿ ಬದಲಾವಣೆ ತರಲು ಕ್ರಿಕೆಟ್ ಆಸ್ಟ್ರೇಲಿಯಾಗೆ ಮನಸಿಲ್ಲ.

ಉತ್ತಮ ಆಯ್ಕೆ ಲಭ್ಯವಾಗಿದೆ: ಲ್ಯಾಂಗರ್
ಇದೇ ವೇಳೆ ಡೇವಿಡ್ ವಾರ್ನರ್ ತಂಡಕ್ಕೆ ಮರಳಿರುವ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್, ಆರಂಭಿಕ ಬ್ಯಾಟ್ಸ್ಮನ್‌ಗಳ ಸ್ಥಾನದಲ್ಲಿ ಹೆಚ್ಚು ಆಯ್ಕೆ ಲಭ್ಯವಾಗಿರುವುದು ತಂಡದ ಪಾಲಿಗೆ ಉತ್ತಮ ಎಂದು ಹೇಳಿದ್ದಾರೆ.
"ಆಯ್ಕೆ ನಮ್ಮೆದುರಿರುವುದು ಉತ್ತಮ. ಟೆಸ್ಟ್ ಪಂದ್ಯಗಳಲ್ಲಿ, ಯುಎಇನಲ್ಲಿ ಹಾಗೂ ಕಳೆದ ಎರಡು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ಉಸ್ಮಾನ್ ಮತ್ತು ಫಿಂಚ್ ಅವರ ಪ್ರದರ್ಶನ ಅದ್ಭುತವಾಗಿದೆ. ಡೇವಿಡ್ ವಾರ್ನರ್ ವಿಶ್ವ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್. ನಂ.3 ಸ್ಥಾನದಲ್ಲಿ ಶಾನ್ ಮಾರ್ಷ್ ಕೂಡ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಸ್ಟೀವನ್ ಸ್ಮಿತ್ ಯಾವುದೇ ಕ್ರಮಾಂಕದಲ್ಲಿ ಆಡಬಹುದು,'' ಎಂದು ಲ್ಯಾಂಗರ್ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ಟ್ರೇಲಿಯಾದ ವಿಶ್ವಕಪ್ ತಂಡ ಇಂತಿದೆ
ಆರೊನ್ ಫಿಂಚ್ (ನಾಯಕ), ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್‌ಸನ್, ನೇಥನ್ ಕೌಲ್ಟರ್ ನೈಲ್, ಜೇಸನ್ ಬೆಹ್ರೆನ್‌ಡಾರ್ಫ್, ನೇಥನ್ ಲಯಾನ್, ಆಡಮ್ ಝಾಂಪ.
ಆಸ್ಟ್ರೇಲಿಯಾ ತಂಡ ಜೂನ್ 1ರಂದು ಅಫಘಾನಿಸ್ತಾನ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications