ಈ ಕ್ರಿಕೆಟ್ ಮಾದರಿಯನ್ನು ಕಿತ್ತೊಗೆಯಲು ಸಲಹೆ ನೀಡಿದ ಪಾಕ್ ದಿಗ್ಗಜ ಕ್ರಿಕೆಟಿಗ

ಕ್ರಿಕೆಟ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ದೇಶಗಳನ್ನು ತಲುಪುತ್ತಿದೆ. ಅದರಲ್ಲೂ ಟಿ20 ಮಾದರಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಬಳಿಕ ಕ್ರಿಕೆಟ್ ವೇಗವಾಗಿ ವಿಶ್ವದಲ್ಲಿ ವ್ಯಾಪಿಸತೊಡಗಿದೆ. ಈ ಕಾರಣದಿಂದಾಗಿ ಕ್ರಿಕೆಟ್ ಎಂಬುದು ಕೇವಲ ಕಾಮನ್‌ವೆಲ್ತ್ ದೇಶಗಳಲ್ಲಿ ಮಾತ್ರವೇ ಜನಪ್ರಿಯವಾಗಿದ್ದ ಕ್ರಿಕೆಟ್ ಈಗ ಅದರಾಚೆಗೆ ಮೀರಿ ಬೆಳೆಯುತ್ತಿದೆ. ಕ್ರಿಕೆಟ್‌ನ ಜಾಗತಿಗ ಆಡಳಿತ ಸಂಸ್ಥೆ ಐಸಿಸಿಯಲ್ಲಿ ಈಗಾಗಲೇ 104 ರಾಷ್ಟ್ರಗಳು ಸದಸ್ಯ ರಾಷ್ಟ್ರಗಳಾಗಿ ಸೇರ್ಪಡೆಯಾಗಿದೆ. ಇದರಲ್ಲಿ 12 ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳಾದರೆ 92 ಅಸೋಸಿಯೇಟ್ಸ್ ರಾಷ್ಟ್ರಗಳಾಗಿದೆ.
ಕ್ರಿಕೆಟ್ ಇಷ್ಟೆಲ್ಲಾ ಜನಪ್ರಿಯತೆಯನ್ನು ಗಳಿಸುತ್ತಿದ್ದರೂ ಒಂದು ಕ್ರಿಕೆಟ್ ಮಾದರಿ ಮಾತ್ರ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಇತ್ತೀಚಿನ ದಿನಗಳಲ್ಲಿ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಹೇಳಿಕೆ ನೀಡಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಕ್ರಿಕೆಟ್‌ನ ಅಗತ್ಯ ಕಾಣಿಸುತ್ತಿಲ್ಲ ಎಂದಿದ್ದಾರೆ.

ಏಕದಿನ ಕ್ರಿಕೆಟನ್ನು ಕಿತ್ತೊಗೆಯಬೇಕು
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನಿಂದ ಏಕದಿನ ಕ್ರಿಕೆಟ್ ಮಾದರಿಯನ್ನು ತೆಗೆದುಹಾಕಬೇಕು ಎಂದಿದ್ದಾರೆ. ಏಕದಿನ ಕ್ರಿಕೆಟ್ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದು ಜನರನ್ನು ಆಕರ್ಷಿಸಲು ವಿಫಲವಾಗುತ್ತಿದೆ. ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಏಕದಿನ ಮಾದರಿಯನ್ನು ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದಿದ್ದಾರೆ.

ಸ್ಟೇಡಿಯಂಗಳು ಖಾಲಿಯಿರುತ್ತವೆ
"ಏಕದಿನ ಕ್ರಿಕೆಟ್ ಜನಪ್ರಿಯತೆಯನ್ನು ಕಳೆದುಕೊಂಡಿದೆ ಎಂದು ನನಗೆ ಅನಿಸುತ್ತಿದೆ. ಇಂಗ್ಲೆಂಡ್‌ನಲ್ಲಿ ಸ್ಟೇಡಿಯಂಗಳು ಭರ್ತಿಯಾಗುತ್ತಿರಬಹುದು. ಆದರೆ ಭಾರತ, ಪಾಕಿಸ್ತಾನ ಸೇರಿದಂತೆ ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾಗಳಲ್ಲಿ ನಡೆಯುವ ಪಂದ್ಯಗಳಲ್ಲಿ ಸ್ಟೇಡಿಯಂಗಳು ಭರ್ತಿಯಾಗುತ್ತಿಲ್ಲ" ಎಂದು ವಾಸಿಮ್ ಅಕ್ರಮ್ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆನ್ ಸ್ಟೋಕ್ಸ್ ನಿರ್ಧಾರದ ಬಗ್ಗೆ ಅಕ್ರಮ್ ಪ್ರತಿಕ್ರಿಯೆ
ಇನ್ನು ಇದೇ ಸಂದರ್ಭದಲ್ಲಿ ಇತ್ತೀಚೆಗೆ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅಕ್ರಂ, ಅವರ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ. "ಅವರ ನಿರ್ಧಾರ ಬೇಸರ ಮೂಡಿಸುತ್ತದೆ ಆದರೆ ಅವರಿಗೆ ನಾನು ಬೆಂಬಲಿಸುತ್ತೇನೆ. ನಾನೋರ್ವ ಕಾಮೆಂಟೇಟರ್ ಆಗಿಯೂ ಏಕದಿನ ಕ್ರಿಕೆಟ್ ಈಗ ನನಗೆ ಸುದೀರ್ಘ ಎನಿಸುತ್ತಿದೆ. ಟಿ20 ಮಾದರಿಯ ಬಳಿಕ ಇದು ಅತಿಯಾಗಿದೆ" ಎಂದಿದ್ದಾರೆ ವಾಸಿಮ್ ಅಕ್ರಮ್.

ಏಕದಿನ ಕ್ರಿಕೆಟ್ ಸಾಯುತ್ತಿದೆ
"ಟಿ20 ಕ್ರಿಕೆಟ್ ಸುಲಭ ಮಾದರಿಯ ಆಟವಾಗಿದೆ. ನಾಲ್ಕು ಗಂಟೆಗಳಲ್ಲಿ ಪಂದ್ಯ ಮುಕ್ತಾಯವಾಗುತ್ತದೆ. ಇನ್ನು ವಿಶ್ವಾದ್ಯಂತ ನಡೆಯುವ ಲೀಗ್ ಕ್ರಿಕೆಟ್‌ಗಳಲ್ಲಿ ಸಾಕಷ್ಟು ಹಣವೂ ದೊರೆಯುತ್ತದೆ. ಇದು ಆಧುನಿಕ ಕ್ರಿಕೆಟ್‌ನ ಭಾಗವಾಗಿದೆ. ಆದರೆ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗಳ ಮಧ್ಯೆ ಏಕದಿನ ಕ್ರಿಕೆಟ್ ಸಾಯುತ್ತಿದೆ. ಆಟಗಾರರಿಗೂ ಏಕದಿನ ಕ್ರಿಕೆಟ್ ಆಡುವುದು ಸುಸ್ತು ಮೂಡಿಸುತ್ತದೆ" ಎಂದಿದ್ದಾರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications