ಶನಿವಾರ, ಜುಲೈ 13ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ 2024ರ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ ಚಾಂಪಿಯನ್ಸ್ ತಂಡವು ಉದ್ಘಾಟನಾ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯೂನಿಸ್ ಖಾನ್ ನಾಯಕತ್ವದ ಪಾಕಿಸ್ತಾನ ಚಾಂಪಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಇದಕ್ಕುತ್ತರವಾಗಿ ಯುವರಾಜ್ ಸಿಂಗ್ ನಾಯಕತ್ವದ ಭಾರತ ಚಾಂಪಿಯನ್ಸ್ ತಂಡ 19.1 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಬೆನ್ನತ್ತಿ ಸುಲಭ ಗೆಲುವು ಸಾಧಿಸಿತು.
ಅಂಬಟಿ ರಾಯುಡು ಕೇವಲ 30 ಎಸೆತಗಳಲ್ಲಿ 50 ರನ್‌ಗಳ ಅಮೋಘ ಇನ್ನಿಂಗ್ಸ್‌ನೊಂದಿಗೆ ಭಾರತ ತಂಡದ ಪರ ಸ್ಟಾರ್ ಪ್ರದರ್ಶನಕಾರರಾಗಿದ್ದರು. ಆರಂಭಿಕರಾದ ರಾಬಿನ್ ಉತ್ತಪ್ಪ ಮತ್ತು ಅಂಬಟಿ ರಾಯುಡು ಪಾಕಿಸ್ತಾನ ಬೌಲರ್‌ಗಳನ್ನು ಪವರ್‌ಪ್ಲೇನಲ್ಲಿ ಎದುರಿಸುವುದರೊಂದಿಗೆ ಭಾರತದ ಚೇಸಿಂಗ್ ಉತ್ತಮ ಆರಂಭವನ್ನು ಪಡೆಯಿತು.
ಬಲಗೈ ಬ್ಯಾಟರ್ ಅಂಬಟಿ ರಾಯುಡು ಮೊದಲ ಓವರ್‌ನಲ್ಲಿಯೇ ಅಮೀರ್ ಯಮೀನ್ ಅವರಿಗೆ ಬೌಂಡರಿ ಮತ್ತು ಸಿಕ್ಸರ್‌ಗೆ ಸಿಡಿಸುವ ಮೂಲಕ ಸ್ವಾಗತಿಸಿದರು.

ಮುಂದಿನ ಓವರ್‌ನಲ್ಲಿ ಯಮೀನ್ ಅವರ ವಿರುದ್ಧ ಎರಡು ಬೌಂಡರಿ ಬಾರಿಸಿದ ರಾಬಿನ್ ಉತ್ತಪ್ಪ ಕೂಡ ದಾಳಿ ಮುಂದುವರಿಸಿದರು. ಆದರೆ, ತಮ್ಮ ಇನ್ನಿಂಗ್ಸ್ ಮುಂದುವರಿಸಲು ವಿಫಲರಾದರು ಮತ್ತು ಅದೇ ಓವರ್‌ನಲ್ಲಿ ಪಾಕಿಸ್ತಾನ ಬೌಲರ್‌ಗೆ ಔಟಾದರು.
ನಂತರ ಮೂರನೇ ಕ್ರಮಾಂಕದಲ್ಲಿ ಬಂದ ಸುರೇಶ್ ರೈನಾ ಬೌಂಡರಿಯೊಂದಿಗೆ ಕ್ರೀಸ್‌ಗೆ ಆಗಮಿಸಿದರು. ಎರಡನೇ ಎಸೆತದಲ್ಲಿ ಸೋಹೈಲ್ ತನ್ವಿರ್‌ಗೆ ನೇರ ಕ್ಯಾಚ್ ನೀಡಿ ಭಾರತ ತಂಡ 38 ರನ್‌ಗಳಿಗೆ 2 ವಿಕೆಟ್ ಆಗಿದ್ದಾಗ ಕ್ರೀಸ್ ತೊರೆದರು.
ಆ ಬಳಿಕ ಅಂಬಟಿ ರಾಯುಡು ನೆಲಕಚ್ಚಿ ಆಡಲು ನಿರ್ಧರಿಸಿದರು ಮತ್ತು ಗುರುಕೀರತ್ ಸಿಂಗ್ ಮಾನ್ ಅವರೊಂದಿಗೆ ನಿರ್ಣಾಯಕ 60 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು.
ಆರಂಭಿಕ ಅಂಬಟಿ ರಾಯುಡು ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು ಮತ್ತು 11 ಓವರ್‌ಗಳ ನಂತರ ಭಾರತವು 98 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಮಾಂಡಿಂಗ್ ಸ್ಥಾನದಲ್ಲಿತ್ತು.
ಭಾರತ ತಂಡಕ್ಕೆ ಪಂದ್ಯವು ತಮ್ಮ ನಿಯಂತ್ರಣದಲ್ಲಿದೆ ಎಂದು ನೋಡಿದಾಗ, ಪಾಕಿಸ್ತಾನ ತಂಡವು ಹತ್ತು ಎಸೆತಗಳ ಅಂತರದಲ್ಲಿ ಅಂಬಟಿ ರಾಯುಡು 30 ಎಸೆತಗಳಲ್ಲಿ 50 ರನ್ ಮತ್ತು ಗುರುಕೀರತ್ ಸಿಂಗ್ ಮಾನ್ 33 ಎಸೆತಗಳಲ್ಲಿ 34 ರನ್ ಗಳಿಸಿದ್ದಾಗ ಎರಡು ತ್ವರಿತ ವಿಕೆಟ್‌ಗಳೊಂದಿಗೆ ಮುನ್ನಡೆ ಸಾಧಿಸಿತು.
ನಂತರ ಯೂಸುಫ್ ಪಠಾಣ್ ಮತ್ತು ಯುವರಾಜ್ ಸಿಂಗ್ ಅವರ 42 ರನ್‌ಗಳ ನಿರ್ಣಾಯಕ ಜೊತೆಯಾಟವು ಭಾರತದ ಗೆಲುವಿಗೆ ಮುನ್ನುಡಿ ಬರೆಯಿತು. ಇದೇ ವೇಳೆ ಕೆಲವು ಕ್ಯಾಚ್‌ಗಳನ್ನು ಇನಿಂಗ್ಸ್‌ನಲ್ಲಿ ಕೈಬಿಡುವ ತಪ್ಪನ್ನು ಪಾಕಿಸ್ತಾನ ತಂಡ ಮಾಡಿತು.
ಕೊನೆಯ 10 ಎಸೆತಗಳಲ್ಲಿ 7 ರನ್‌ಗಳ ಅಗತ್ಯವಿರುವಾಗ ಯೂಸುಫ್ ಪಠಾಣ್ ಔಟಾದಾಗ ಪಂದ್ಯದ ಪರಿಸ್ಥಿತಿ ರೋಚಕ ತಿರುವು ಪಡೆಯಿತು. ಆದಾಗ್ಯೂ, ಯೂಸುಫ್ ಸಹೋದರ ಇರ್ಫಾನ್ ಪಠಾಣ್ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಸರಳವಾಗಿ ಮುಗಿಸಿದರು.
ಇದಕ್ಕೂ ಮುನ್ನ ಮೊಲದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ ತಂಡಕ್ಕೆ ಅನುರೀತ್ ಸಿಂಗ್ ಎರಡನೇ ಓವರ್‌ನಲ್ಲಿ ಮೊದಲ ಆಘಾತ ನೀಡಿದರು. ಪಾಕಿಸ್ತಾನದ ಸ್ಕೋರ್ 14 ರನ್‌ಗಳಾಗಿದ್ದಾಗ 12 ರನ್ ಗಳಿಸಿ ಆಡುತ್ತಿದ್ದ ಆರಂಭಿಕ ಶಾರ್ಜೀಲ್ ಖಾನ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು.
ಸೊಹೈಬ್ ಮಕ್ಸೂದ್ ಕೂಡ ತಮ್ಮ ಉತ್ತಮ ಆರಂಭವನ್ನು ಪರಿವರ್ತಿಸಲು ವಿಫಲರಾದರು. 12 ಎಸೆತಗಳಲ್ಲಿ 21 ರನ್ ಗಳಿಸಿದ ನಂತರ ವಿನಯ್ ಕುಮಾರ್ ಅವರ ವಿಕೆಟ್ ಪಡೆದರು.
ಕಮ್ರಾನ್ ಅಕ್ಮಲ್ 24 ರನ್ ಗಳಿಸಿ ಬೃಹತ್ ಮೊತ್ತದ ಮುನ್ಸೂಚನೆ ನೀಡಿದರು. ಆದರೆ ಒಂಬತ್ತನೇ ಓವರ್‌ನಲ್ಲಿ ಪವನ್ ನೇಗಿಗೆ ವಿಕೆಟ್ ಒಪ್ಪಿಸಿದರು. ಆಗ ಪಾಕಿಸ್ತಾನವು 8.2 ಓವರ್‌ಗಳ ನಂತರ 68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಶೋಯೆಬ್ ಮಲಿಕ್ ತಮ್ಮ ತಂಡಕ್ಕೆ ಆಧಾರವಾದರು ಮತ್ತು ಸ್ಕೋರ್‌ಬೋರ್ಡ್ ಹೆಚ್ಚಿಸಲು ಸಹಾಯ ಮಾಡಿದರು. ಈ ವೇಳೆ ಮಿಸ್ಬಾ-ಉಲ್-ಹಕ್ ಗಾಯದಿಂದ ನಿವೃತ್ತಿಯಾದ ಕಾರಣ, ಪಾಕಿಸ್ತಾನದ ಬ್ಯಾಟಿಂಗ್ ಅಂತಿಮ 5 ಓವರ್‌ಗಳಲ್ಲಿ ಹಿಡಿತ ಕಳೆದುಕೊಂಡಿತು.
ಮಿಸ್ಬಾ-ಉಲ್-ಹಕ್ ಇಲ್ಲದೆ ಪರದಾಡಿದ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಸೊಹೈಲ್ ತನ್ವಿರ್ 9 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದ್ದರಿಂದ ಸವಾಲಿನ ಮೊತ್ತ ಗಳಿಸಿತು.