
ಮೆಲ್ಬರ್ನ್, ನವೆಂಬರ್ 23: ಟಿ20 ಸರಣಿ ಗೆಲ್ಲಲು ಒಂದೇ ಗೆಲುವು ಬಾಕಿಯಿದೆ. ಭಾರತದ ವಿರುದ್ಧ ಸಿಡ್ನಿಯಲ್ಲಿ ನಡೆಯುವ ಮೂರನೇ ಮತ್ತು ಅಂತಿಮ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುತ್ತೇವೆ ಎಂದು ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಬೆನ್ ಮೆಕ್‌ಡರ್ಮೊಟ್ ಹೇಳಿದ್ದಾರೆ.
ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಮಬರ್ 23) ನಡೆದ ಇತ್ತಂಡಗಳ ನಡುವಣ ದ್ವಿತೀಯ ಟಿ20 ಪಂದ್ಯ ಮಳೆಯ ಕಾರಣ ಪೂರ್ಣಗೊಳ್ಳಲಿಲ್ಲ. ಆಸ್ಟ್ರೇಲಿಯಾ 19 ಓವರ್ ಆಡಿತ್ತು. ಆದರೆ ಭಾರತದ ಇನ್ನಿಂಗ್ಸ್ ಅವಕಾಶ ಸಿಗಲಿಲ್ಲವಾದ್ದರಿಂದ ಅದನ್ನು 'ಫಲಿತಾಂಶವಿಲ್ಲದ ಪಂದ್ಯ'ವೆಂದು ಘೋಷಿಸಲಾಯ್ತು.
ಮೆಲ್ಬರ್ನ್ ಪಂದ್ಯದ ಬಳಿಕ ಮಾತನಾಡಿದ ಮೆಕ್‌ಡರ್ಮೊಟ್, 'ಭಾರತದಂತಹ ಬಲಿಷ್ಠ ದೇಶದೆದುರು ಸರಣಿ ಗೆಲ್ಲಲು ಯಾವಾಗಲೂ ಇಂಥ ಅವಕಾಶ ಸಿಗೋದಿಲ್ಲ. ನಾವೀಗ ಚೆನ್ನಾಗಿಯೇ ಆಡುತ್ತಿದ್ದೇವೆ. ಸರಣಿ ಗೆಲ್ಲಲು ಒಂದೇ ಗೆಲುವು ಬಾಕಿಯಿದೆ, ಗೆಲ್ಲುತ್ತೇವೆ ಕೂಡ' ಎಂದರು.
ಸರಣಿಯ ಮೊದಲ ಪಂದ್ಯದ ವೇಳೆಯೂ ಮಳೆ ಕಾಡಿಸಿತ್ತು. 17 ಓವರ್ ನಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ಕಳೆದು 158 ರನ್ ಪೇರಿಸಿತ್ತು. ಮಳೆಯಿಂದಾಗಿ ಪಂದ್ಯವನ್ನು 17 ಒವರ್ ಗೆ ಕಡಿತಗೊಳಿಸಿ ಭಾರತಕ್ಕೆ ಗೆಲ್ಲಲು 174 ರನ್ ಗುರಿ ನೀಡಲಾಗಿತ್ತು. ಆದರೆ ಆ ಪಂದ್ಯದಲ್ಲಿ ಭಾರತ 4 ರನ್ ನಿಂದ ಸೋತಿತ್ತು. ಹೀಗಾಗಿ ಆಸೀಸ್ ಈಗ ಸರಣಿಯಲ್ಲಿ 1-0ಯಿಂದ ಮುನ್ನಡೆಯಲ್ಲಿದ್ದು, ಗೆಲುವಿನ ಹುಮ್ಮಸ್ಸಿನಲ್ಲಿದೆ.