
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಳಿದ ಸದಸ್ಯರು ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 26ರಿಂದ ನಡೆಯಲಿರುವ ಟೆಸ್ಟ್ ಸರಣಿಗೆ ತಯಾರಿಗೂ ಮುನ್ನ ಬಯೋ ಬಬಲ್‌ನಲ್ಲಿ ಉಳಿಯಲಿದ್ದಾರೆ.
ಸೆಂಚುರಿಯನ್ ಮೈದಾನದಲ್ಲಿ ಡಿಸೆಂಬರ್ 26ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇದೀಗ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲಿದೆ. ಏಕದಿನ ನಾಯಕತ್ವದಿಂದ ವಜಾಗೊಂಡಿರುವ ವಿರಾಟ್ ಕೊಹ್ಲಿ ಯಾವ ರೀತಿಯಲ್ಲಿ ಮೈದಾನದಲ್ಲಿ ಟೀಕಾಕಾರಿಗೆ , ಬಿಸಿಸಿಐ ಆಯ್ಕೆ ಸಮಿತಿಗೆ ಉತ್ತರ ನೀಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಏಕದಿನ ಹಾಗೂ ಟಿ20 ನಾಯಕತ್ವದ ಹೊರತಾಗಿಯು ವಿರಾಟ್ ಕೊಹ್ಲಿ ಟೆಸ್ಟ್ ತಂಡವನ್ನ ಹೇಗೆ ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ವಿರಾಟ್‌ರನ್ನ ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಿದ್ದೇ ಒಳಿತಾಯಿತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದ್ರಿಂದ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೂಡ ಹೊರತಾಗಿಲ್ಲ.
ಕಳೆದೆರಡು ವರ್ಷಗಳಿಂದ ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲಗೊಂಡಿದ್ದಾರೆ. 70 ಅಂತರಾಷ್ಟ್ರೀಯ ಶತಕಗಳ ಒಡೆಯನಾದ ವಿರಾಟ್ ಕಳೆದೆರಡು ವರ್ಷಗಳಲ್ಲಿ ಒಂದೂ ಶತಕ ಸಿಡಿಸಿದೇ ಇರುವುದು ಅವರ ಮೇಲಿದ್ದ ಒತ್ತಡವನ್ನು ವಿವರಿಸುತ್ತದೆ. ಆದ್ರೀಗ ಲಿಮಿಟೆಡ್ ಓವರ್‌ಗಳ ನಾಯಕತ್ವದ ಒತ್ತಡವಿಲ್ಲದೆ ವಿರಾಟ್ ಬ್ಯಾಟ್ ಬೀಸಬಹುದಾಗಿದ್ದು, ಎರಡು ವರ್ಷಗಳ ಹಿಂದಿನ ವಿರಾಟ್ ಕೊಹ್ಲಿಯನ್ನು ನೋಡಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಈಗ ಏಕದಿನ ಮತ್ತು ಟಿ20 ನಾಯಕತ್ವದ ಹೊರೆ ಇಲ್ಲದ ಕಾರಣ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ಅವರನ್ನು ನಾವು ಎರಡು ವರ್ಷಗಳ ಹಿಂದಿನ ರೀತಿಯಲ್ಲಿ ನೋಡಬಹುದು, ಶತಕದ ಬೆನ್ನಲ್ಲೇ ಮತ್ತೊಂದು ಶತಕ ಸಿಡಿಸುವ ರೀತಿ ಎಂದು ಗವಾಸ್ಕರ್ ಹೇಳಿದ್ದಾರೆ.
ಇನ್ನು ವೈಟ್ ಬಾಲ್ ಕ್ರಿಕೆಟ್ಗೆ ರೋಹಿತ್ ಅವರನ್ನು ಕ್ಯಾಪ್ಟನ್ ಮಾಡಿದ್ದು ಅತ್ಯುತ್ತಮ ನಿರ್ಧಾರ ಎಂದಿರುವ ಗವಾಸ್ಕರ್, ನಾಯಕನ ಜವಾಬ್ದಾರಿಯಲ್ಲಿ ರೋಹಿತ್ ಆಟ ಅದ್ಭುತವಾಗಿರುತ್ತದೆ. ಇದಕ್ಕೆ ಮುಂಬೈ ಇಂಡಿಯನ್ಸ್ ತಂಡವೇ ಸಾಕ್ಷಿ ಎಂದಿದ್ದಾರೆ.
ನೀವು ನಾಯಕನಾದಾಗ ನಿಮ್ಮ ಶಾಟ್ ಸೆಲೆಕ್ಷನ್‌ನಲ್ಲಿ ಬದಲಾವಣೆ ಇರುತ್ತದೆ. ಜೊತೆಗೆ ಜವಾಬ್ದಾರಿ ಇರುತ್ತದೆ. ಇದೇ ಕಾರಣಕ್ಕೆ ಮುಂಬೈ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ರನ್ ಗಳಿಸಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೂ ಮೊದಲೇ ನಾಯಕತ್ವ ಬಿಟ್ಟುಕೊಡುವುದಾಗಿ ತಿಳಿಸಿದ್ದರು. ಇದ್ರ ಜೊತೆಗೆ ಏಕದಿನ ಮತ್ತು ಟೆಸ್ಟ್ ಫಾರ್ಮೆಟ್‌ನಲ್ಲಿ ನಾಯಕತ್ವ ಮುಂದುವರಿಸುವುದಾಗಿ ತಿಳಿಸಿದ್ರು. ಆದ್ರೆ ಈ ಹೇಳಿಕೆಯೇ ಕೊಹ್ಲಿ ಕ್ಯಾಪ್ಟನ್ಸಿಗೆ ಕುತ್ತು ತಂದಿರಬಹುದು ಎಂದು ಗವಾಸ್ಕರ್ ಅಂದಾಜಿಸಿದ್ದಾರೆ.
ಕೊಹ್ಲಿ ತನ್ನ ವಿದಾಯ ಪತ್ರದಲ್ಲಿ ಬರೆದ ಸಾಲಿನಿಂದ ಬಿಸಿಸಿಐನ ಉನ್ನತ ಅಧಿಕಾರಿಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು. ಇದು ವಿರಾಟ್ ಮೇಲಿನ ವಿರೋಧಿ ಭಾವನೆ ಉಂಟಾಗಲು ಕಾರಣವಾಗಿರಬಹುದು ಎಂದು ಲಿಟ್ಲ್ ಮಾಸ್ಟರ್ ಹೇಳಿದ್ದಾರೆ.
ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಡಿಸೆಂಬರ್ 26ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಭಾರತ-ದಕ್ಷಿಣ ಆಫ್ರಿಕಾ ವೇಳಾಪಟ್ಟಿ ಈ ಕೆಳಗಿದೆ.
ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್
ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಪ್ರಿಯಾಂಕ್ ಪಾಂಚಾಲ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.