
ಪೋರ್ಟ್ ಆಫ್ ಸ್ಪೇನ್, ಜೂನ್ 10: 'ಸಾಕೆಂದರೆ ಸಾಕಷ್ಟೆ' ಎಂದಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ವರ್ಣಭೇದ ನೀತಿಯ ಬಗ್ಗೆ ತುಟಿ ಬಿಚ್ಚಿದ್ದಾರೆ. ಹಲವಾರು ವರ್ಷಗಳಿಂದ ತಾರತಮ್ಯಕ್ಕೆ ಒಳಗಾಗಿರುವ ಕರಿಯ ಜನರಿಗೆ ಸಮಾನತೆ ಮತ್ತು ಗೌರವ ಬೇಕು ಎಂದು ಬ್ರಾವೋ ಹೇಳಿದ್ದಾರೆ.
ಯುಎಸ್‌ಎಯಲ್ಲಿ ಬಿಳಿಯ ಪೊಲೀಸ್ ಒಬ್ಬ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರನ್ನು ಕೊಂದಿದ್ದ. ಜಾರ್ಜ್ ಸಾವಿಗೀಡಾಗುತ್ತಲೇ ವಿಶ್ವದಾದ್ಯಂತ ವರ್ಣಭೇದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಾಮಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದರು. ಇದೀಗ ಬ್ರಾವೋ ಕೂಡ ತಾರತಮ್ಯದ ವಿರುದ್ಧ ಮಾತನಾಡಿದ್ದಾರೆ.
'ವಿಶ್ವದಲ್ಲಿ ಏನಾಗುತ್ತಿದೆ ಎಂದು ನೋಡುವಾಗ ಬೇಸರವಾಗುತ್ತದೆ. ಒಬ್ಬ ಕರಿಯ ವ್ಯಕ್ತಿಯಾಗಿ ಕರಿಯ ಜನಾಂಗ ಕಷ್ಟ ನುಂಗಿಕೊಂಡು ಬಂದಿದ್ದರ ಬಗ್ಗೆ ನನಗೆ ಗೊತ್ತಿದೆ. ನಾವು ಸೇಡಿಗಾಗಿ ಯಾವತ್ತಿಗೂ ಪ್ರಶ್ನಿಸುತ್ತಿಲ್ಲ. ನಾವು ಸಮಾನತೆ ಮತ್ತು ಗೌರವಕ್ಕಾಗಿ ಕೇಳುತ್ತಿದ್ದೇವೆ ಅಷ್ಟೇ,' ಎಂದು ಜಿಂಬಾಬ್ವೆ ಮಾಜಿ ಆಟಗಾರ ಪೊಮ್ಮಿ ಎಂಬಾಂಗ್ವಾ ಜೊತೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡುತ್ತ ಬ್ರಾವೋ ಹೇಳಿದ್ದಾರೆ.
ಲೈವ್ ಚಾಟ್ ವೇಳೆ ಬ್ರಾವೋ, ಸಾಮಿ ಐಪಿಎಲ್‌ನಲ್ಲಿ ವರ್ಣಭೇದ ಎದುರಿಸಿರುವುದಾಗಿ ಮಾಡಿದ ಆರೋಪದ ಬಗ್ಗೆ ಮಾತನಾಡಿಲ್ಲ. ಆದರೆ ತಾರತಮ್ಯ ಬೇಡ ಅನ್ನೋದನ್ನು ಒತ್ತಿ ಹೇಳಿದ್ದಾರೆ. 'ನಾವು ಇನ್ನೊಬ್ಬರಿಗೆ ಗೌರವ ಕೊಡುತ್ತೇವೆ. ಆದರೆ ನಾವೇ ಯಾಕೆ ಮತ್ತೆ ಮತ್ತೆ ಇಂಥದ್ದನ್ನು ಎದುರಿಸುತ್ತಿದ್ದೇವೆ? ಸಾಕೆಂದರೆ ಸಾಕಷ್ಟೆ. ನಮಗೆ ಸಮಾನತೆ ಬೇಕು. ನಮಗೆ ಸೇಡು ಬೇಡ, ಯುದ್ಧ ಬೇಡ,' ಎಂದು ಬ್ರಾವೋ ನುಡಿಸಿದ್ದಾರೆ.