
ಮುಂಬೈ, ಜೂನ್ 25: ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಅವರು ಮುಂಬೈಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆ ನೋವಿನ ಸಮಸ್ಯೆಯಲ್ಲಿರುವ ಲಾರಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. 2019ರ ವಿಶ್ವಕಪ್ ಕ್ರಿಕೆಟ್ ಸಂಬಂಧ ಸ್ಪೋರ್ಟ್ಸ್ ನೆಟ್ವರ್ಕ್‌ನ ತಜ್ಞರಾಗಿ ಲಾರಾ ಭಾರತದಲ್ಲಿದ್ದರು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಪ್ಯಾರೆಲ್ ನ ಗ್ಲೋಬಲ್ ಹಾಸ್ಪಿಟಲ್‌ನಲ್ಲಿ ಲಾರಾ ದಾಖಲಾಗಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎನ್‌ಐ ತಿಳಿಸಿದೆ. ಮೇ 2ರಂದು 50ರ ಹರೆಯಕ್ಕೆ ಕಾಲಿರಿಸುತ್ತಿರುವ ಲಾರಾ ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಗುರುತಿಸಿಕೊಂಡವರು. ಲಾರಾ ಹೆಸರಿನಲ್ಲಿ ಈಗಲೂ ದಾಖಲೆಗಳಿವೆ.
ವೆಸ್ಟ್ ಇಂಡೀಸ್ ಪರ ಲಾರಾ 1990ನಿಂದ 2007ರ ವರೆಗೆ 131 ಟೆಸ್ಟ್ ಮತ್ತು 299 ಏಕದಿನ ಪಂದ್ಯಗಳನ್ನಾಡಿದ್ದರು. ಟೆಸ್ಟ್ ನಲ್ಲಿ 34 ಶತಕ ಮತ್ತು 48 ಅರ್ಧಶತಕಗಳು ಸೇರಿ ಒಟ್ಟು 11953 ರನ್ ದಾಖಲೆ ಲಾರಾ ಹೆಸರಿನಲ್ಲಿದೆ. ಒಟ್ಟು 299 ಏಕದಿನ ಪಂದ್ಯಗಳಲ್ಲಿ 19 ಶತಕ ಮತ್ತು 63 ಅರ್ಧಶತಕಗಳು ಸೇರಿ ಒಟ್ಟು 10405 ರನ್ ದಾಖಲೆ ಲಾರಾ ಮಾಡಿದ್ದಾರೆ.
1990ರ ಅವಧಿಯಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟಿಂಗ್ ಅಧಿಪತ್ಯ ಸಾಧಿಸಿದ್ದವರು ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ. ಆ ದಿನಗಳಲ್ಲಿ ತೆಂಡೂಲ್ಕರ್ ಅವರಂತೆ ಲಾರಾ ಕೂಡ ಆಸ್ಟ್ರೇಲಿಯಾ ವಿರುದ್ಧ ರನ್ ದಾಖಲೆಗಾಗಿ ಗುರುತಿಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧ 31 ಟೆಸ್ಟ್ ಪಂದ್ಯಗಳಲ್ಲಿ ಲಾರಾ 9 ಶತಕ, 11 ಅರ್ಧ ಶತಕಗಳು ಸೇರಿ 2,856 ರನ್ ಬಾರಿಸಿದ್ದಾರೆ.