
ಕ್ರೈಸ್ಟ್‌ಚರ್ಚ್, ಜುಲೈ 2: ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಸರ್ ಎವರ್ಟನ್ ವೀಕ್ಸ್ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎವರ್ಟನ್, ಬಾರ್ಬಡೋಸ್‌ನ ಕ್ರೈಸ್ಟ್ ಚರ್ಚ್‌ನಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಎವರ್ಟನ್ ವೀಕ್ಸ್ ಅವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪರ 48 ಟೆಸ್ಟ್ ಪಂದ್ಯಗಳನ್ನಾಡಿದ್ದರು. 58.62ರ ಸರಾಸರಿಯಲ್ಲಿ 4,455 ರನ್ ದಾಖಲೆ ಹೊಂದಿದ್ದರು. ಅಲ್ಲದೆ 15 ಶತಕಗಳ ದಾಖಲೆಯೂ ಎವರ್ಟನ್ ಹೆಸರಿನಲ್ಲಿದೆ. ಕಳೆದ ವರ್ಷ ಜೂನ್‌ನಲ್ಲಿ ವೀಕ್ಸ್ ಹೃದಯಾಘಾತಕ್ಕೆ ಒಳಗಾಗಿದ್ದರು. ಆವತ್ತಿನಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
1947-48ರಲ್ಲಿ ಇಂಗ್ಲೆಂಡ್ ವಿರುದ್ಧ ಸರ್ ಎವರ್ಟನ್ ಪಾದಾರ್ಪಣೆ ಪಂದ್ಯವನ್ನಾಡಿದ್ದರು. ಆ ಪಂದ್ಯದಲ್ಲಿ ವೀಕ್ಸ್ ಗಮನಾರ್ಹ ಪ್ರದರ್ಶನವೇನೂ ತೋರಿರಲಿಲ್ಲ. ಆದರೆ ಆ ಬಳಿಕ ಮುಂದಿನ ವರ್ಷ ನಡೆದ ಇಂಗ್ಲೆಂಡ್ ಮತ್ತು ಭಾರತ ಪ್ರವಾಸ ಸರಣಿಯಲ್ಲಿ ಎವರ್ಟನ್, ಸತತ ಐದು ಶತಕಗಳನ್ನು ಬಾರಿಸಿ ವಿಶ್ವದ ಗಮನ ಸೆಳೆದಿದ್ದರು.

ಅದೇ ಪ್ರವಾಸ ಸರಣಿಗಳಲ್ಲಿ ಎವರ್ಟನ್ ಸತತ 6ನೇ ಶತಕ ದಾಖಲಿಸುವುದರಲ್ಲಿದ್ದರು. ಆದರೆ ಭಾರತದ ಮದ್ರಾಸ್ (ಈಗಿನ ಚೆನ್ನೈ)ನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿವಾದಾತ್ಮಕವಾಗಿ ಆವತ್ತು ವೀಕ್ಸ್ 90ರನ್‌ಗೆ ರನ್ ಔಟ್ ಆಗಿದ್ದರು. ಆ ದಿನ ಹಲವಾರು ದಿನಪತ್ರಿಕೆಗಳು '90 ರನ್‌ಗೆ ಕೊನೆಗೂ ವಿಕೆಟ್ ಒಪ್ಪಿಸಿದ ವೀಕ್ಸ್,' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದವು.