
ಆ್ಯಂಟಿಗುವಾ: ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಅಪರೂಪದ ವಿಶ್ವದಾಖಲೆಗೆ ಕಾರಣರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ದಾಖಲೆ ಪೊಲಾರ್ಡ್ ನಿರ್ಮಿಸಿದ್ದಾರೆ. ಪೊಲಾರ್ಡ್ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ ಜಯ ಗಳಿಸಿದೆ.
ಬುಧವಾರ (ಮಾರ್ಚ್ 3) ನಡೆದಿದ್ದ ಶ್ರೀಲಂಕಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ನಾಯಕ ಕೀರನ್ ಪೊಲಾರ್ಡ್, ಅಕಿಲ ಧನಂಜಯ ಅವರ 6ನೇ ಓವರ್‌ನಲ್ಲಿ ಎಲ್ಲಾ ಎಸೆತಕ್ಕೂ ಸಿಕ್ಸ್ ಬಾರಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್ ಒಂದರಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ 3ನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪೊಲಾರ್ಡ್ ಪಾತ್ರರಾಗಿದ್ದಾರೆ.
5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಪೊಲಾರ್ಡ್, 11 ಎಸೆತಗಳಲ್ಲಿ 38 ರನ್ ಸಿಡಿಸಿದರು. ಇದರಲ್ಲಿ 6 ಸಿಕ್ಸರ್ ಸೇರಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಓವರ್‌ಗೆ 6 ಸಿಕ್ಸರ್ ಚಚ್ಚಿದ ದಾಖಲೆ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ (ಏಕದಿನ), ಭಾರತದ ಯುವರಾಜ್ ಸಿಂಗ್ (ಟಿ20ಐ) ಮತ್ತು ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ (ಟಿ20ಐ) ಸೇರಿಕೊಂಡಿದ್ದಾರೆ.
2007ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ನೆದರ್ಲ್ಯಾಂಡ್ಸ್ ವಿರುದ್ಧ ಓವರ್ ಒಂದರಲ್ಲಿ 36 ರನ್ ಚಚ್ಚಿದ್ದರು. ಇನ್ನು 2007ರ ಉದ್ಘಾಟನಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿದ್ದರು. ಈಗ ಪೊಲಾರ್ಡ್ ಇದೇ ಸಾಧನೆ ಮಾಡಿದ 3ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಪೊಲಾರ್ಡ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರ, ಉಪನಾಯಕ ಜವಾಬ್ದಾರಿಯಲ್ಲಿದ್ದಾರೆ.