
ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರು ಇತ್ತೀಚೆಗೆ ಟೀಂ ಇಂಡಿಯಾದ ಏಕದಿನ ನಾಯಕತ್ವ ಸಮಸ್ಯೆಯನ್ನು ನಿಭಾಯಿಸಿದ ರೀತಿಗಾಗಿ ರಾಷ್ಟ್ರೀಯ ಆಯ್ಕೆಗಾರರು ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ 18 ಸದಸ್ಯರ ತಂಡವನ್ನ ಪ್ರಕಟಿಸಿದ ಬಿಸಿಸಿಐ , ಏಕದಿನ ಕ್ರಿಕೆಟ್‌ನ ನಾಯಕತ್ವ ಬದಲಾವಣೆ ಕುರಿತಾಗಿಯೂ ಪ್ರಕಟಣೆ ಹೊರಡಿಸಿತು. ಯಾವುದೇ ಕಾರಣಗಳನ್ನ ನೀಡದೆ ಟಿ20 ನಾಯಕತ್ವದ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲೂ ರೋಹಿತ್ ಶರ್ಮಾನೇ ಕ್ಯಾಪ್ಟನ್ ಎಂದು ಘೋಷಿಸಿತು.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೂ ಮೊದಲೇ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ರು. ಯುಎಇನಲ್ಲಿ ನಡೆದ ವಿಶ್ವಕಪ್ ಲೀಗ್‌ಹಂತದಲ್ಲೇ ಭಾರತ ಹೊರಬಿದ್ದ ಬಳಿಕ ರೋಹಿತ್ ನಾಯಕತ್ವ ವಹಿಸಿಕೊಂಡರು.
"ನಾನು ಅವರೊಂದಿಗೆ (ವಿರಾಟ್ ಕೊಹ್ಲಿ) ಇನ್ನೂ ಮಾತನಾಡಿಲ್ಲ. ಕೆಲವು ಕಾರಣಗಳಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಆದರೆ ನನ್ನ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ, ಅವರು ನಿರ್ದಿಷ್ಟವಾಗಿ ಟಿ 20 ನಾಯಕತ್ವದಿಂದ ಕೆಳಗಿಳಿದಿದ್ದರು ಮತ್ತು ಆಯ್ಕೆದಾರರು ತಕ್ಷಣವೇ ಅವರನ್ನು ವೈಟ್-ಬಾಲ್ ಸ್ವರೂಪಗಳಿಂದ ಕೆಳಗಿಳಿಯದಂತೆ ಕೇಳಬೇಕಾಗಿತ್ತು" ಎಂದು ಖೇಲ್ನೀತಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವಾಗ ರಾಜ್‌ಕುಮಾರ್ ಹೇಳಿದರು.
ಇತ್ತೀಚೆಗಷ್ಟೇ ಸೌರವ್ ಗಂಗೂಲಿ ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಪ್ರತ್ಯೇಕ ನಾಯಕರನ್ನು ಹೊಂದಲು ಸಾಧ್ಯವಿಲ್ಲ ಎಂದು ಆಯ್ಕೆಗಾರರ ಸಮಿತಿ ಮತ್ತು ಬಿಸಿಸಿಐ ಒಮ್ಮತ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದ್ದರು. ಹಾಗೇನಾದ್ರು ಆಗಿದ್ದಲ್ಲಿ ತಂಡದಲ್ಲಿ ಗೊಂದಲದ ವಾತಾವರಣ ಉಂಟುಮಾಡುತ್ತದೆ ಎಂದಿದ್ದರು.
ಆದ್ರೆ ಬಿಸಿಸಿಐ ಮುಖ್ಯಸ್ಥರ ಹೇಳಿಕೆಯಿಂದ ಆಶ್ಚರ್ಯವಾಯಿತು ಎಂದು ಕೊಹ್ಲಿ ಕೋಚ್ ಹೇಳಿದ್ದಾರೆ. "ಟಿ20 ಅಂತರಾಷ್ಟ್ರೀಯ ನಾಯಕತ್ವದಿಂದ (ವಿಶ್ವಕಪ್‌ಗೆ ಮೊದಲು) ಅವರು ಕೊಹ್ಲಿಯನ್ನು ಕೆಳಗಿಳಿಯದಂತೆ ಕೇಳಿಕೊಂಡಿದ್ದರು ಎಂದು ಸೌರವ್ ಗಂಗೂಲಿ ಅವರ ಕಾಮೆಂಟ್‌ಗಳನ್ನು ನಾನು ಇತ್ತೀಚೆಗೆ ಓದಿದ್ದೇನೆ. ನನಗೆ ಅಂತಹದ್ದೇನೂ ನೆನಪಿಲ್ಲ. ಈ ರೀತಿ ಆಗಿರೋದು ಅನುಮಾನ ಎಂಬಂತಿದೆ ಎನ್ನಲಾಗಿದೆ.
"ಆಯ್ಕೆ ಸಮಿತಿಯು ನಿರ್ಧಾರದ ಹಿಂದೆ ಯಾವುದೇ ಕಾರಣವನ್ನು ನೀಡುವುದಿಲ್ಲ. ಆಡಳಿತ ಅಥವಾ ಬಿಸಿಸಿಐ ಅಥವಾ ಆಯ್ಕೆದಾರರು ಏನು ಬಯಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ. ಯಾವುದೇ ಸ್ಪಷ್ಟೀಕರಣವಿಲ್ಲ, ಪಾರದರ್ಶಕತೆ ಇಲ್ಲ. ಇದು ಹೇಗೆ ಸಂಭವಿಸಿತು ಎಂಬುದು ವಿಷಾದದ ಸಂಗತಿ. ಆತ ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ'' ಎಂದು ರಾಜ್‌ಕುಮಾರ್ ತಮ್ಮ ಮಾತು ಮುಗಿಸಿದ್ದಾರೆ.
ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಅವರು 9 ದ್ವಿಪಕ್ಷೀಯ ಸರಣಿಗಳಲ್ಲಿ 8 ಅನ್ನು ಗೆದ್ದರು ಆದರೆ ವಿರಾಟ್ ICC ಟ್ರೋಫಿ ಗೆಲ್ಲಲು ವಿಫಲರಾದರು.