ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಸ್ನೇಹದ ಕಥೆಗಳಿವೆ. ಕೆಲವೊಮ್ಮೆ ರೋಹಿತ್ ಶರ್ಮಾ ಮತ್ತ ವಿರಾಟ್ ಕೊಹ್ಲಿ ನಡುವಿನ ಗೆಳತನದ ಬಗ್ಗೆ ಚರ್ಚೆಗಳು ನಡೆದರೆ, ಕೆಲವೊಮ್ಮೆ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ ಇಂದಿಗೂ, ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಸ್ನೇಹದ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತದೆ. ಸುಮಾರು 37 ವರ್ಷಗಳ ಈ ಸ್ನೇಹಿತರು ಮಂಗಳವಾರ ಮುಂಬೈನಲ್ಲಿ ಭೇಟಿ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ವಿನೋದ್ ಕಾಂಬ್ಳಿ ಮತ್ತು ಸಚಿನ್ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ, ಒಂದು ಕಾಲದಲ್ಲಿ ಈ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವೇನು? ಎಂಬುದರ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಇವರಿಬ್ಬರ ಸ್ನೇಹ ಸಿನಿಮಾಕ್ಕಿಂತ ಕಡಿಮೆಯೇನಿಲ್ಲ. ಆದರೆ, ಈ ಒಂದು ಹೇಳಿಕೆ ಇಬ್ಬರ ಸ್ನೇಹದಲ್ಲಿ ಬಿರುಗಾಳಿ ಎಬ್ಬಿಸಿದೆಯೇ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಉಳಿದಿದೆ.

ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರನ್ನು ಕ್ರಿಕೆಟ್ ಜಗತ್ತಿನಲ್ಲಿ ಪರಿಚಯಿಸುವ ಅಗತ್ಯವಿಲ್ಲ. ರಮಾಕಾಂತ್ ಅಚ್ರೇಕರ್ ಅವರ ಗರಡಿಯಲ್ಲಿ ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡಲು ಶುರು ಮಾಡಿದರು. ಹ್ಯಾರಿಸ್ ಶೀಲ್ಡ್‌ನಲ್ಲಿ ಈ ಇಬ್ಬರು 664 ರನ್‌ಗಳ ದಾಖಲೆಯ ಜೊತೆಯಾಟವಾಡಿದ್ದರು. ಆಗ ಸಚಿನ್-ಕಾಂಬ್ಳಿ ಹೆಸರು ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡಿತ್ತು. ಆಗ ಕಾಂಬ್ಳಿಗೆ 16 ವರ್ಷವಾದರೆ, ಸಚಿನ್‌ಗೆ ಕೇವಲ 14 ವರ್ಷ ವಯಸ್ಸು. ಇವರಿಬ್ಬರೂ ಚಿಕ್ಕ ವಯಸ್ಸಿನಲ್ಲೇ ಟೀಮ್ ಇಂಡಿಯಾ ಪ್ರವೇಶಿಸಿದ್ದರು. ಆದರೆ, ಸಚಿನ್ ಮಾಸ್ಟರ್ ಬ್ಲಾಸ್ಟರ್ ಎನಿಸಿಕೊಂಡ ನಂತರ ಕ್ರಿಕೆಟ್ ದೇವರಾದರು. ಆದರೆ ಕಾಂಬ್ಳಿ ಅವರ ಅದ್ಭುತ ಪ್ರತಿಭೆಯ ಹೊರತಾಗಿಯೂ ಅವರು ಕಾರಣಾಂತರಗಳಿಂದ ಕ್ರಿಕೆಟ್‌ನಿಂದ ದೂರ ಉಳಿದರು.
ಈ ಸಂದರ್ಭಗಳಲ್ಲಿ ಕಾಂಬ್ಳಿ ಮತ್ತು ಸಚಿನ್ ಗೆಳೆತನದಲ್ಲಿ ಬಿರುಕು ಮೂಡಿರುವ ಬಗ್ಗೆ ಚರ್ಚೆಗಳು ತೀವ್ರಗೊಂಡವು. 2009 ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ, ಕಾಂಬ್ಳಿ ಅವರು ಮಾಸ್ಟರ್ ಬ್ಲಾಸ್ಟರ್ ತಮ್ಮ ವೃತ್ತಿಜೀವನವನ್ನು ಉಳಿಸಬಹುದಿತ್ತು. ಆದರೆ, ಅವರು ನನ್ನನ್ನು ಬೆಂಬಲಿಸಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಚಿನ್ ಮತ್ತು ಕಾಂಬ್ಳಿ ನಡುವೆ ಬಿರುಕು ಉಂಟಾಗಿರಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳು ಕೊಟ್ಟಿರುವ ಕಾರಣ.
ಸಚಿನ್ 2013ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು. ವಿದಾಯ ಭಾಷಣದಲ್ಲಿ ಕಾಂಬ್ಳಿ ಬಗ್ಗೆ ಎಲ್ಲಿಯೂ ಅವರು ಮಾತನಾಡಿರಲಿಲ್ಲ. ನಂತರ ಸಚಿನ್ ರಿಟೈರ್‌ಮೆಂಟ್ ಪಾರ್ಟಿಯಲ್ಲೂ ಕಾಂಬ್ಳಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮುಂಬೈನಲ್ಲಿ ಈ ಇಬ್ಬರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.