ಕಾಶ್ಮೀರ ಕಣಿವೆಯ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಇಡೀ ದೇಶದಲ್ಲಿ ಶೋಕ ಆವರಿಸಿದೆ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಭೀಕರ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಅಟ್ಟಾರಿ ಗಡಿ ಚೆಕ್ ಪೋಸ್ಟ್ ಮುಚ್ಚುವುದು, ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸುವುದು ಮತ್ತು ಪಾಕಿಸ್ತಾನಿ ನಾಗರಿಕರಿಗೆ ಭಾರತೀಯ ವೀಸಾ ನೀಡುವುದನ್ನು ನಿಲ್ಲಿಸುವುದು ಸೇರಿವೆ. ಅಲ್ಲದೆ, ಈ ಸಂಬಂಧ ಕ್ರಿಕೆಟಿಗರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈಗ ಪಾಕಿಸ್ತಾನದ ಬಗ್ಗೆ ಮಾತೊಂದನ್ನು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತವು ಪಾಕಿಸ್ತಾನದೊಂದಿಗಿನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ಮುರಿಯಬೇಕು. ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಿಯೂ ಸಹ ಪಾಕಿಸ್ತಾನದೊಂದಿಗೆ ಭಾರತ ಆಡಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧದ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಗಂಗೂಲಿ ಅವರು, "ಶೇಕಡಾ 100 ರಷ್ಟು ಭಾರತ ಇದನ್ನು ಮಾಡಬೇಕು. ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು. ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿರುವುದು ತಮಾಷೆಯಾಗಿ ಪರಿಣಮಿಸಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಮಾತನಾಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ಭಾರತ ನೆಲದಲ್ಲಿ ನಡೆದ ದಾಳಿಯನ್ನು ಖಂಡಿಸಿದ್ದರು. ಉಭಯ ದೇಶಗಳ ನಡುವಿನ ಸಂಬಂಧಗಳ ಬಗ್ಗೆ ಕೇಂದ್ರ ಸರ್ಕಾರದ ನಿಲುವಿನಿಂದಾಗಿ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುತ್ತಿಲ್ಲ. ಭವಿಷ್ಯದಲ್ಲಿ ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳನ್ನು ಆಡುವುದಿಲ್ಲ. ಆದರೆ ಐಸಿಸಿ ಟೂರ್ನಿಗಳ ವಿಷಯಕ್ಕೆ ಬಂದಾಗ, ನಾವು ಐಸಿಸಿಯ ಒಳಗೊಳ್ಳುವಿಕೆಯಿಂದಾಗಿ ಆಡುತ್ತೇವೆ. ಏನು ನಡೆಯುತ್ತಿದೆ ಎಂಬುದರ ಬಗ್ಗೆ ಐಸಿಸಿಗೂ ಅರಿವಿದೆ ಎಂದು ತಿಳಿಸಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು. ವರಿದಗಳ ಪ್ರಕಾರ, ಈ ಘಟನೆಯ ನಂತರ, ಬಿಸಿಸಿಐ ಐಸಿಸಿಗೆ ಪತ್ರ ಬರೆದು ಐಸಿಸಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇಡದಂತೆ ವಿನಂತಿಸಿದೆ.