ಮತ್ತೆ ಐಪಿಎಲ್ ಕಡೆ ಗಂಭೀರ್, ರೋಹಿತ್ ಬದಲು ರಾಹುಲ್ ಉಪನಾಯಕ: ಡಿ.18ರ ಕ್ರಿಕೆಟ್ ರೌಂಡ್ಅಪ್

ಡಿಸೆಂಬರ್ 18ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ಜರುಗಿದ್ದು, ಒಂದೆಡೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆಟಗಾರರು ಫುಟ್‌ಬಾಲ್ ಆಡುವ ಮೂಲಕ ಚುಟುಕು ಅಭ್ಯಾಸ ಆರಂಭಿಸಿದ್ದರೆ, ಮತ್ತೊಂದೆಡೆ ಬಿಸಿಸಿಐ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಅವರನ್ನು ನೂತನ ಉಪನಾಯಕನನ್ನಾಗಿ ಘೋಷಿಸಿದೆ. ಹೀಗೆ ಡಿಸೆಂಬರ್ 18ರ ಕ್ರಿಕೆಟ್ ಸುದ್ದಿಗಳ ರೌಂಡ್ಅಪ್ ಈ ಕೆಳಕಂಡಂತಿದೆ.
* ಇತ್ತೀಚೆಗಷ್ಟೇ ಹೊರಬಿದ್ದಿರುವ ವರದಿಯೊಂದರ ಪ್ರಕಾರ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಲಕ್ನೋ ತಂಡದ ಪಾಲಾಗಲಿದ್ದಾರೆ ಎನ್ನಲಾಗುತ್ತಿದೆ. ಹೌದು ಗೌತಮ್ ಗಂಭೀರ್ ಅವರನ್ನು ಲಕ್ನೋ ತನ್ನ ತೆಕ್ಕೆಗೆ ಹಾಕಿಕೊಳ್ಳಲಿದ್ದು ಮೆಂಟರ್ ಸ್ನಾನವನ್ನು ನೀಡಲಿದೆ. ಈ ಮೂಲಕ ಈ ಹಿಂದೆ ಆಟಗಾರನಾಗಿ ಪ್ರೇಕ್ಷಕರ ಮನಗೆದ್ದಿದ್ದ ಗೌತಮ್ ಗಂಭೀರ್ ಕ್ರಿಕೆಟ್‍ನಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದು ಮೆಂಟರ್ ಆಗಿ ಮತ್ತೆ ಕ್ರಿಕೆಟ್‍ನತ್ತ ಮುಖ ಮಾಡಲಿದ್ದಾರೆ.
* ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವುದಕ್ಕೂ ಮುನ್ನ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದ ರೋಹಿತ್ ಶರ್ಮಾ ಗಾಯಕ್ಕೊಳಗಾದ ಹಿನ್ನಲೆಯಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯುವ ಸಲುವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದರು. ಹೀಗಾಗಿ ರೋಹಿತ್ ಶರ್ಮಾ ನಿಭಾಯಿಸಬೇಕಿದ್ದ ಭಾರತ ಟೆಸ್ಟ್ ತಂಡದ ಉಪನಾಯಕ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಆ ಪ್ರಶ್ನೆಗೆ ಇದೀಗ ಬಿಸಿಸಿಐ ಉತ್ತರವನ್ನು ನೀಡಿದ್ದು, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೆ ಎಲ್ ರಾಹುಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆಯನ್ನು ಮಾಡಿದೆ.
* ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಜೋಹಾನ್ಸ್ ಬರ್ಗ್ ತಲುಪಿದ ಟೀಮ್ ಇಂಡಿಯಾ ಆಟಗಾರರನ್ನು ಕ್ವಾರಂಟೈನ್ ನಿಯಮಕ್ಕೆ ಒಳಪಡಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಎಲ್ಲಾ ಆಟಗಾರರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದ ನಂತರ ಪ್ರಿಟೋರಿಯಾದ ಐರಿನ್ ಕಂಟ್ರಿ ಲಾಡ್ಜ್ ಎಂಬ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಏರ್ಪಾಟು ಮಾಡಿದೆ. ಹೀಗೆ ಹೋಟೆಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿದ್ದು ಡಿಸೆಂಬರ್ 19ರ ಭಾನುವಾರದಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಇನ್ನು ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಸಂಜೆ ಸಮಯದಲ್ಲಿ ಜಾಗಿಂಗ್ ಹೊರಟಿದ್ದು ಕೆಲಕಾಲ ಫುಟ್ಬಾಲ್ ಆಡಿ ಅಭ್ಯಾಸವನ್ನು ಕೂಡ ನಡೆಸಿದ್ದಾರೆ. ಹೌದು, ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರರ ಜೊತೆ ಫುಟ್ಬಾಲ್ ಆಡುವ ಮೂಲಕ ಚುಟುಕು ಅಭ್ಯಾಸ ನಡೆಸಿದ್ದಾರೆ.
* ಇತ್ತೀಚಿಗಷ್ಟೆ ನಡೆದ ಐಪಿಎಲ್ ರಿಟೆನ್ಚನ್ ಪ್ರಕ್ರಿಯಯಲ್ಲಿ ರಿಟೇನ್ ಆಗದೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದ ರವಿಚಂದ್ರನ್ ಅಶ್ವಿನ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದರ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಕೂಡ ನಡೆದಿವೆ. ಇನ್ನು ಈ ಕುರಿತಾಗಿ ಇದೀಗ ಸ್ವತಃ ರವಿಚಂದ್ರನ್ ಅಶ್ವಿನ್ ಅವರೇ ಪ್ರತಿಕ್ರಿಯಿಸಿದ್ದು ತಾನು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮತ್ತೆ ಐಪಿಎಲ್ ಆಡಬೇಕು ಎಂಬುದೇ ತನ್ನ ದೊಡ್ಡ ಆಸೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
* ಗುರುಗಾವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಮಗೆ ಯಾವ ಆಟಗಾರನ ಆ್ಯಟಿಟ್ಯೂಡ್ ತುಂಬಾ ಇಷ್ಟವಾಗುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸೌರವ್ ಗಂಗೂಲಿ '' ನನಗೆ ವಿರಾಟ್ ಕೊಹ್ಲಿ ಆ್ಯಟಿಟ್ಯೂಡ್ ತುಂಬಾ ಇಷ್ಟ. ಆದ್ರೆ ಇತ್ತೀಚೆಗೆ ಅವರು ತುಂಬಾ ಜಗಳವಾಡುತ್ತಾರೆ'' ಎಂದು ಗಂಗೂಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications