
ಡಿಸೆಂಬರ್ 30ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು ಒಂದೆಡೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಸಾಧಿಸಿದ್ದರೆ, ಮತ್ತೊಂದೆಡೆ ಅಂಡರ್ 19 ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿರುವ ಭಾರತ ತಂಡ ಫೈನಲ್ ತಲುಪಿದೆ. ಹೀಗೆ ಡಿಸೆಂಬರ್ 30ರ ಕ್ರಿಕೆಟ್ ಸುದ್ದಿಗಳ ರೌಂಡ್ಅಪ್ ಈ ಕೆಳಕಂಡಂತಿದೆ..
* ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ನೀಡಿದ 305ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 191ರನ್‌ಗಳಿಗೆ ಆಲೌಟ್ ಆಗುವ ಮೂಲಕ 113ರನ್‌ಗಳ ಹೀನಾಯ ಸೋಲು ಕಂಡಿದೆ.
* ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೀಡುವ ವರ್ಷದ ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ನಾಲ್ವರನ್ನು ನಾಮನಿರ್ದೇಶನಗೊಳಿಸಲಾಗಿದ್ದು ಇದರಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಕೂಡ ಸೇರಿದ್ದಾರೆ.
* ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನ 62ನೇ ಓವರ್ ಬೌಲಿಂಗ್ ವೇಳೆ ಮೊಹಮ್ಮದ್ ಸಿರಾಜ್ ಎಸೆದ ಎಸೆತವನ್ನು ಡಿಫೆಂಡ್ ಮಾಡಿದ ಟೆಂಬಾ ಬವುಮಾ ಚೆಂಡನ್ನು ನೇರವಾಗಿ ಮೊಹಮ್ಮದ್ ಸಿರಾಜ್ ಕೈ ಸೇರಿಸಿದರು. ಈ ಸಮಯದಲ್ಲಿ ಟೆಂಬಾ ಬವುಮಾ ರನ್ ಕದಿಯಲು ಯತ್ನವನ್ನೂ ಮಾಡದೇ ಕ್ರೀಸ್ ಒಳಗಡೆಯೇ ನಿಂತಿದ್ದರು. ಆದರೂ ಸಹ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಸಿರಾಜ್ ಚೆಂಡು ಕೈಗೆ ಸಿಗುತ್ತಿದ್ದಂತೆಯೇ ಟೆಂಬಾ ಬವುಮಾಗೆ ಜೋರಾಗಿ ಬೀಸಿದರು, ಪರಿಣಾಮ ಚೆಂಡು ಟೆಂಬಾ ಬವುಮಾ ಕಾಲಿಗೆ ಬಲವಾಗಿ ತಗುಲಿತು. ತಕ್ಷಣವೇ ತನ್ನ ತಪ್ಪಿನ ಅರಿವಾದ ಮೊಹಮ್ಮದ್ ಸಿರಾಜ್ ಟೆಂಬಾ ಬವುಮಾ ಬಳಿ ಬಂದು ಮಾತನಾಡಿದರು. ಆದರೆ ಮೊಹಮ್ಮದ್ ಸಿರಾಜ್ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದ ತುಂಬಾ ನೆಟ್ಟಿಗರು ಕಿಡಿಕಾರುತ್ತಿದ್ದು ಮೊಹಮ್ಮದ್ ಸಿರಾಜ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
* ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಖಲೆಯ ಗೆಲುವು ಸಾಧಿಸಿದರೂ ಸಹ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕಪಟ್ಟಿಯಲ್ಲಿ ಏರಿಕೆ ಕಂಡಿಲ್ಲ. ಈ ಪಂದ್ಯಕ್ಕೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಪಂದ್ಯ ಮುಗಿದ ನಂತರವೂ ನಾಲ್ಕನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ತಂಡಗಳಿಗಿಂತಲೂ ಹೆಚ್ಚಿನ ಪಂದ್ಯಗಳಲ್ಲಿ ( 4 ) ಜಯ ಸಾಧಿಸಿದೆ ಮತ್ತು ಹೆಚ್ಚಿನ ಅಂಕಗಳನ್ನೂ ( 54 ) ಕೂಡ ಪಡೆದುಕೊಂಡಿದೆ. ಆದರೂ ಸಹ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿಲ್ಲ, ಇದಕ್ಕೆ ಕಾರಣ ಗೆಲುವಿನ ಶೇಕಡಾಂಶ. ಸದ್ಯ ಪ್ರಥಮ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಯಾವುದೇ ಪಂದ್ಯಗಳಲ್ಲಿಯೂ ಸೋತಿಲ್ಲ ಹಾಗೂ ಡ್ರಾ ಮಾಡಿಕೊಂಡಿಲ್ಲ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ ಕೂಡ ಇದೇ ರೀತಿ ಇದೆ. ಆದರೆ ಟೀಮ್ ಇಂಡಿಯಾ 1 ಪಂದ್ಯದಲ್ಲಿ ಸೋತಿದೆ ಮತ್ತು 2 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಗೆಲುವಿನ ಶೇಕಡಾಂಶ ಕಡಿಮೆಯಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
* ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಸ್ಟೀವನ್ ಸ್ಮಿತ್ ಒಂದು ಗಂಟೆಗೂ ಹೆಚ್ಚು ಕಾಲ ಲಿಫ್ಟ್‌ನೊಳಗೆ ಸಿಲುಕಿಕೊಂಡು ಹೊರಬರಲಾಗದ ಘಟನೆ ಪಾರ್ಕ್ ಹಯಾಟ್ ಮೆಲ್ಬೋರ್ನ್ನಲ್ಲಿ ನಡೆದಿದೆ. 30ನೇ ಡಿಸೆಂಬರ್ 2021 ರಂದು ಸ್ಟೀವ್ ಸ್ಮಿತ್ ಒಂದು ಗಂಟೆಗೂ ಹೆಚ್ಚು ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಲಿಫ್ಟ್‌ನೊಳಗೆ ಏನಾಯಿತು ಎಂಬುದರ ಕುರಿತಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ ಸ್ಮಿತ್ , ಲಿಫ್ಟಿನಲ್ಲಿ ಸಿಲುಕಿಗೊಂಡಿದ್ದೇನೆ, ಲಿಫ್ಟ್ ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.