ಕ್ರಿಕೆಟ್‌ನಲ್ಲಿ 'ಸಾಫ್ಟ್ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಇಂಗ್ಲೆಂಡ್-ಭಾರತ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯಿಂದ ಅಂಪೈರಿಂಗ್‌ನಲ್ಲಿನ 'ಸಾಫ್ಟ್ ಸಿಗ್ನಲ್' ತೀರ್ಪಿನ ಬಗ್ಗೆ ವಿವಾದ ಸದ್ದು ಮಾಡುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ, ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲೂ ಈ ವಿವಾದಾತ್ಮಕ 'ಸಾಫ್ಟ್ ಸಿಗ್ನಲ್' ಅನ್ನು ತೆಗೆದು ಹಾಕಲಾಗಿದೆ. ಯಾಕೆಂದರೆ ಈ ತೀರ್ಪು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೀಡು ಮಾಡಿತ್ತು. ಹಲವರ ಅಸಮಾಧಾನಕ್ಕೂ ಕಾರಣವಾಗಿತ್ತು.
ಸಾಫ್ಟ್ ಸಿಗ್ನಲ್ ಇತ್ತೀಚೆಗಷ್ಟೇ ಜೋರು ಸದ್ದು ಮಾಡಿತ್ತು. ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಸ್ಯಾಮ್ ಕರನ್ ಓವರ್‌ನಲ್ಲಿ ಡೇವಿಡ್ ಮಲಾನ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಅಸಲಿಗೆ ಯಾದವ್ ಆವತ್ತು ಔಟ್ ಆಗಿದ್ದು 'ಸಾಫ್ಟ್ ಸಿಗ್ನಲ್' ತೀರ್ಪಿನಿಂದ.
ಹಾಗಾದರೆ ಈ ಸಾಫ್ಟ್ ಸಿಗ್ನಲ್ ಅಂದ್ರೇನು? ಯಾಕೆ ಈ ತೀರ್ಪು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚಾಲ್ತಿಯಲ್ಲಿದೆ? ಇದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ.

SKY ಔಟ್ ಆಗಿದ್ದು ಹೇಗೆ?
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್ 4ನೇ ಟಿ20ಐ ಪಂದ್ಯದಲ್ಲಿ 31 ಎಸೆತಗಳಿಗೆ 57 ರನ್ ಬಾರಿಸಿದ್ದ ಸೂರ್ಯಕುಮಾರ್ ಯಾದವ್, ಸ್ಯಾಮ್ ಕರನ್ ಅವರ 13.2ನೇ ಓವರ್‌ನಲ್ಲಿ ಡೇವಿಡ್ ಮಲಾನ್‌ಗೆ ಕ್ಯಾಚ್ ನೀಡಿ ಔಟಾಗಬೇಕಾಯ್ತು. ಅಸಲಿಗೆ ಡೈವ್ ಹಾರಿ ಮಲಾನ್ ಪೂರ್ಣಗೊಳಿಸಿದ್ದ ಕ್ಯಾಚ್ ನೆಲಕ್ಕೆ ತಾಗಿದ ರೀತಿಯಲ್ಲಿ ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೂ ಅಂಪೈರ್ ನೀಡಿದ್ದ ಸಾಫ್ಟ್ ಸಿಗ್ನಲ್ ಆಧಾರದಲ್ಲಿ ಯಾದವ್ ಅವರನ್ನು ಔಟ್ ನೀಡಿದ್ದು ನೋಡಿ ಭಾರತೀಯ ಅಭಿಮಾನಿಗಳು ಅಸಮಾಧಾನ ತೋರಿಕೊಂಡಿದ್ದರು.

ಕ್ರಿಕೆಟ್‌ನಲ್ಲಿ ಸಾಫ್ಟ್ ಸಿಗ್ನಲ್ ಅಂದ್ರೇನು?
ಕ್ರಿಕೆಟ್‌ನಲ್ಲಿ ಕ್ಲಿಷ್ಟಕರ ಸನ್ನಿವೇಶ ಎದುರಾದಾಗ, ಅಂಪೈರ್‌ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಾಗ ಈ ಸಾಫ್ಟ್ ಸಿಗ್ನಲ್ ನಿಯಮ ಬಳಸಿಕೊಳ್ಳಲಾಗುತ್ತದೆ. ಅಂದರೆ, ಒಂದು ಕ್ಯಾಚ್ ಸನ್ನಿವೇಶ ಬಂದಾಗ ಆನ್ ಫೀಲ್ಡ್ ಅಂಪೈರ್ ಅಂತಃಪ್ರಜ್ಞೆ ಆಧರಿಸಿ ಒಂದು ನಿರ್ಧಾರಕ್ಕೆ ಬರಬೇಕಾಗಿರುತ್ತದೆ. ತಮ್ಮ ನಿರ್ಧಾರವನ್ನು ಥರ್ಡ್ ಅಂಪೈರ್‌ಗೆ ಪರಿಶೀಲಿಸಲು ಕೋರಿಕೊಳ್ಳುವ ಮೊದಲು ಅಂಪೈರ್ ಒಂದು ತೀರ್ಪು ಪ್ರಕಟಿಸಬೇಕಾಗುತ್ತದೆ. ಆ ಬಳಿಕ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್)ನಲ್ಲಿ ಎಲ್ಲಾ ಕೋನಗಳಿಂದಲೂ ಪರಿಶೀಲಿಸಲಾಗುತ್ತದೆ. ಆಗ ತಂತ್ರಜ್ಞಾನದಿಂದಲೂ ಸರಿಯಾದ ತೀರ್ಮಾನಕ್ಕೆ ಬರಲು ಸಾಕ್ಷಿ ಕಾಣಿಸದಿದ್ದಾಗ, ರಿವ್ಯೂ ವೇಳೆ ಇನ್ನೂ ಅನುಮಾನ ಉಳಿದಿದ್ದಾಗ 'ಸಾಫ್ಟ್ ಸಿಗ್ನಲ್' ನಿಯಮ ಬಳಸಿಕೊಳ್ಳಲಾಗುತ್ತದೆ. ಅಂದರೆ ರಿವ್ಯೂಗೂ ಮುನ್ನ ಅಂಪೈರ್ ಔಟ್ ಕೊಟ್ಟಿದ್ದರೆ ಔಟ್ ಎಂದು, ನಾಟೌಟ್ ಕೊಟ್ಟಿದ್ದರೆ ನಾಟ್ ಔಟ್ ಎಂದು ಅಂತಿಮವಾಗಿ ತೀರ್ಪು ನೀಡಲಾಗುತ್ತದೆ.

ಸಾಫ್ಟ್ ಸಿಗ್ನಲ್ ಬದಲಿಸಲಾಗುವುದಿಲ್ಲವೆ?
ಸೂರ್ಯಕುಮಾರ್ ಯಾದವ್ ವಿಚಾರದಲ್ಲಿ, ರಿವ್ಯೂಗೂ ಮುನ್ನವೇ ಅಂಪೈರ್ ಔಟ್ ಎಂದು ಸಾಫ್ಟ್ ಸಿಗ್ನಲ್ ನೀಡಿದ್ದರು. ರಿವ್ಯೂ ವೇಳೆ ಅದು ಔಟೋ, ನಾಟೌಟೋ (ಚೆಂಡು ನೆಲಕ್ಕೆ ತಾಗಿದೆಯೋ ಇಲ್ಲವೋ) ಅನ್ನೋದು ನಿರ್ಧರಿಸಲು ಸಾದ್ಯವಾಗಿರಲಿಲ್ಲ. ಆಗ ಅಂಪೈರ್ ಕೊಟ್ಟಿದ್ದ ಸಾಫ್ಟ್ ಸಿಗ್ನಲ್‌ನ ಪ್ರಕಾರ ಯಾದವ್ ಅವರನ್ನು ಔಟ್ ಎಂದು ತೀರ್ಮಾನಿಸಲಾಗಿತ್ತು. ಹಾಗಾದರೆ, ಸಾಫ್ಟ್ ಸಿಗ್ನಲ್ ಔಟ್ ಆಗಿದ್ದಾಗ ಅದು ಎಂದಿಗೂ ನಾಟೌಟ್ ಎಂದು ಬದಲಾಯಿಸಲಾಗುವುದಿಲ್ಲ? ಆಗುತ್ತದೆ. ಆದರೆ ರಿವ್ಯೂ ವೇಳೆ ಅದು ನಾಟ್ ಔಟ್ ಅನ್ನೋದಕ್ಕೆ ಸರಿಯಾದ ಸಾಕ್ಷಿ ದೊರಕಬೇಕು. ನಾಟ್ ಔಟ್ ಎನ್ನುವ ಬಗ್ಗೆ ರಿವ್ಯೂನಲ್ಲಿ ಯಾವುದೇ ಅನುಮಾನ ಉಳಿದಿರಬಾರದು. ಆಗ ಅಂಪೈರ್ ನೀಡಿದ್ದ ಸಾಫ್ಟ್ ಸಿಗ್ನಲ್ ಔಟ್ ಎಂದಿದ್ದರೂ ಅಂತಿಮವಾಗಿ ತೀರ್ಪು ನಾಟೌಟ್ ಎಂದು ಬದಲಾಗುತ್ತದೆ. ರಿವ್ಯೂ ವೇಳೆ ಗೊಂದಲ ಉಳಿದಿದ್ದರೆ ಮಾತ್ರ ಅಂಪೈರ್ ಕೊಟ್ಟ ಸಾಫ್ಟ್ ಸಿಗ್ನಲ್ ಅನ್ನೇ ಎತ್ತಿಕೊಳ್ಳಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications