ಐಪಿಎಲ್ 2025 ರ 46ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ವೇಗಿ ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್, ಕೃನಾಲ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ಜೊತೆಯಾಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕಾರಣವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬೆಂಗಳೂರು 6 ವಿಕೆಟ್‌ಗಳಿಂದ ಸೋಲಿಸಿ ಐಪಿಎಲ್ 2025 ರಲ್ಲಿ ಏಳನೇ ಗೆಲುವು ದಾಖಲಿಸಿತು. ಜೊತೆಗೆ ಡೆಲ್ಲಿ ವಿರುದ್ಧದ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‍ಗಳಲ್ಲಿ 8 ವಿಕೆಟ್‌ಗಳಿಗೆ 161 ರನ್ ಗಳಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ ನಷ್ಟಕ್ಕೆ 18.3 ಓವರ್‍ಗಳಲ್ಲಿ 165 ರನ್ ಗಳಿಸಿ ಜಯ ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ 165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆಯುವಲ್ಲಿ ಎಡುವಿತು. ಆರಂಭಿಕ ಯುವ ಬ್ಯಾಟರ್ ಕೇವಲ 6 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ನಂತರ ಇಂಪ್ಯಾಕ್ಟ್ ಆಟಗಾರ ದೇವದತ್ ಪಡಿಕ್ಕಲ್ ಖಾತೆ ತೆರೆಯದೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದರು. ಇದಾದ ಬಳಿಕ ನಾಯಕ ರಜತ್ ಪಾಟಿದಾರ್ ಕೇವಲ 6 ರನ್‌ಗಳಿಗೆ ರನೌಟ್ ಆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಹಂತದಲ್ಲಿ 26 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ, ಬೆಂಗಳೂರು ತಂಡದ ಪರ ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡರು. ಬೆಂಗಳೂರು ತಂಡದ ಇನ್ನಿಂಗ್ಸ್ ಅನ್ನು ಇಬ್ಬರು ತಾಳ್ಮೆಯುವ ಬ್ಯಾಟಿಂಗ್ ಮಾಡುವ ಮೂಲಕ ಮುನ್ನಡೆಸಿದರು.
ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಲೆಕ್ಕಚಾರವನ್ನು ಉಲ್ಟಾ ಮಾಡಿದರು. ಅರುಣ್ ಜೇಟ್ಲಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಜೋಡಿ ಡೆಲ್ಲಿ ಬೌಲರ್ಸ್‌ಗೆ ಬೆವರಿಳಿಸಿತು. ಈ ವೇಳೆ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ 18ನೇ ಓವರ್‍ನಲ್ಲಿ ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ಔಟಾದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 51 ರನ್‌ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.
ಕೃನಾಲ್ ಪಾಂಡ್ಯ ಕೊನೆವರೆಗೆ ಕ್ರೀಸ್‌ನಲ್ಲಿ ತಂಡದ ಗೆಲುವಿಗೆ ಹೋರಾಡಿದರು. ಅವರು 47 ಎಸೆತಗಳಲ್ಲಿ 73 ರನ್ ಗಳಿಸಿ ಅಜೇಯರಾಗುಳಿದರು. ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಬಂದ ಟಿಮ್ ಡೇವಿಡ್ 5 ಎಸೆತಗಳಲ್ಲಿ 19 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತ ಕೃನಾಲ್ ಪಾಂಡ್ಯ ಜೋಡಿ ಡೆಲ್ಲಿ ಗೆಲುವನ್ನು ಕಸಿದುಕೊಂಡರು. ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ನಾಲ್ಕನೇ ವಿಕೆಟ್‌ಗೆ 119 ರನ್‌ಗಳ ಜೊತೆಯಾಟ ನೀಡುವ ಮೂಲಕ ಆರ್‌ಸಿಬಿಯ ಗೆಲುವಿಗೆ ಅಡಿಪಾಯ ಹಾಕಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾದ ಅಭಿಷೇಕ್ ಪೊರೆಲ್ (28) ಮತ್ತು ಫಾಫ್ ಡು ಪ್ಲೆಸಿಸ್ (22) ಉತ್ತಮ ಆರಂಭ ನೀಡಲ್ಲ. ಇದರ ಮಧ್ಯೆ ಕೆಎಲ್ ರಾಹುಲ್ 41 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿ ವಿಕೆಟ್ ಕಳೆದುಕೊಂಡರು. ಟ್ರಿಸ್ಟಾನ್ ಸ್ಟಬ್ಸ್ 34 ರನ್ ಗಳಿಸಿ ತಂಡಕ್ಕೆ ನೆರವಾದರು. ನಾಯಕ ಅಕ್ಷರ್ ಪಟೇಲ್ 15 ರನ್ ಗಳಿಸಿದರೆ, ಅಶುತೋಷ್ ಶರ್ಮಾ ಕೇವಲ 2 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಪರಿಣಾಮ ಡೆಲ್ಲಿ ತಂಡ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಶಕ್ತವಾಯಿತು.