14 ವರ್ಷದ ವೈಭವ್ ಸೂರ್ಯವಂಶಿ ನಂತರ, 17 ವರ್ಷದ ಆಯುಷ್ ಮ್ಹಾತ್ರೆ ಹೆಸರು ಐಪಿಎಲ್ 2025 ರಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ 17ನೇ ವಯಸ್ಸಿನಲ್ಲಿ ಅವರು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರು 17 ವರ್ಷ ಮತ್ತು 278 ದಿನಗಳ ವಯಸ್ಸಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಆಯುಷ್ ಮ್ಹಾತ್ರೆ ತಮ್ಮ ಚೊಚ್ಚಲ ಪಂದ್ಯದಲ್ಲಿ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 32 ರನ್ ಗಳಿಸಿದರು. ಈ ಸ್ಪೋಟಕ ಇನ್ನಿಂಗ್ಸ್ ಮೂಲಕ ಅವರು ಎಲ್ಲರ ಚಿತ್ತ ಕದ್ದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಆಯುಷ್ ಮ್ಹಾತ್ರೆ, 18 ವರ್ಷ 139 ದಿನಗಳಲ್ಲಿ ಸಿಎಸ್‌ಕೆ ಪರ ಆಡಿದ್ದ ಅಭಿನವ್ ಮುಕುಂದ್ ಅವರ ದಾಖಲೆಯನ್ನು ಮುರಿದ್ದಾರೆ. ಇದಲ್ಲದೆ, ಅಂಕಿತ್ ರಜಪೂತ್ (19 ವರ್ಷ 123 ದಿನಗಳು), ಮಥಿಶಾ ಪತಿರಾನ (19 ವರ್ಷ 148 ದಿನಗಳು) ಮತ್ತು ನೂರ್ ಅಹ್ಮದ್ (20 ವರ್ಷ 79 ದಿನಗಳು) ಸಿಎಸ್‌ಕೆ ಪರ ಆಡಿದ ಟಾಪ್ ಐದು ಕಿರಿಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿ ವಿಷಯವೆನೆಂದರೆ ಮಥಿಶಾ ಪತಿರಾನ, ನೂರ್ ಅಹ್ಮದ್ ಮತ್ತು ಆಯುಷ್ ಮ್ಹಾತ್ರೆ ಒಟ್ಟಿಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು.
ಮೊಣಕೈ ಮುರಿತದಿಂದಾಗಿ ಐಪಿಎಲ್ 2025 ರಿಂದ ಹೊರಗುಳಿದಿರುವ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬದಲಿಗೆ ಆಯುಷ್ ಮ್ಹಾತ್ರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಬದಲಿಗೆ ಆಯುಷ್ ಸ್ಥಾನ ಪಡೆದರು. ರಾಹುಲ್ ತ್ರಿಪಾಠಿಇಲ್ಲಿಯವರೆಗೆ ಟೂರ್ನಿಯಲ್ಲಿ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಸಿಕ್ಕ ಅವಕಾಶದಲ್ಲಿ ಮಿಂಚಿದ ಆಯುಷ್ ರೋಹಿತ್ ಶರ್ಮಾ ಬ್ಯಾಟಿಂಗ್ ಶೈಲಿಯನ್ನು ನೆನಪಿಸಿದರು.
ಮುಂಬೈ ಮೂಲದ ಆಯುಷ್ ಮ್ಹಾತ್ರೆ, 2024-25ರ ಇರಾನಿ ಕಪ್ ಸೀಸನ್‌ನಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡಿದರು. ಅವರ ದೇಶೀಯ ವೃತ್ತಿಜೀವನದ ಆರಂಭದಿಂದಲೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇದುವರೆಗೆ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಯುಷ್ ಎರಡು ಶತಕಗಳು ಸೇರಿದಂತೆ 31.50 ಸರಾಸರಿಯಲ್ಲಿ 504 ರನ್ ಗಳಿಸಿದ್ದಾರೆ. ಆದಾಗ್ಯೂ, ಭಾರತದ ದೇಶೀಯ 50 ಓವರ್‌ಗಳ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯ ಮೂಲಕ ಆಯುಷ್ ಬೆಳಕಿಗೆ ಬಂದರು. ಈ ಟೂರ್ನಿಯಲ್ಲಿ ಅವರು ಏಳು ಇನ್ನಿಂಗ್ಸ್‌ಗಳಲ್ಲಿ 65.42 ಸರಾಸರಿಯಲ್ಲಿ ಎರಡು ಶತಕಗಳು ಸೇರಿದಂತೆ 458 ರನ್ ಕಲೆ ಹಾಕಿದರು.
ಆಯುಷ್ ಮ್ಹಾತ್ರೆ ಅವರು ನಾಗಾಲ್ಯಾಂಡ್ ವಿರುದ್ಧ 181 ರನ್ ಗಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 150+ ರನ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ಮೊದಲು ಅವರ ಮುಂಬೈ ತಂಡದ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿತ್ತು. ಆಯುಷ್ ಆಫ್-ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲರು. 2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇವಲ 4.51 ರ ಪ್ರಭಾವಶಾಲಿ ಎಕಾನಮಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು.
ಕಳೆದ ವರ್ಷ ಅಂಡರ್-19 ಏಷ್ಯಾಕಪ್‌ನಲ್ಲಿ ಅವರು ಭಾರತ ತಂಡದ ಭಾಗವಾಗಿದ್ದರು. ಅಲ್ಲಿ ಅವರು ಮೂರು ಇನ್ನಿಂಗ್ಸ್‌ಗಳಲ್ಲಿ 55 ರನ್ ಗಳಿಸಿದ್ದರು. ಅವರು 2025 ರ ಅಂಡರ್-19 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿದ್ದಾರೆ.