ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಮತ್ತೊಮ್ಮೆ, ಚೆಪಾಕ್ ಅಂಗಳದಲ್ಲಿ ಚೆನ್ನೈ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಚೆನ್ನೈ ತಂಡವನ್ನು ಪಂಜಾಬ್ ಕಿಂಗ್ಸ್ 4 ವಿಕೆಟ್‌ಗಳಿಂದ ಸೋಲಿಸಿತು. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರ ಇನ್ನಿಂಗ್ಸ್ ನೆರವಿನಿಂದ ಪಂಜಾಬ್ ಜಯ ಸಾಧಿಸಿತು. ಇದಕ್ಕೂ ಮುನ್ನ ಚೆನ್ನೈ ತಂಡ ತನ್ನ ತವರಿನಲ್ಲಿ ನಾಲ್ಕು ಬಾರಿ ಸೋಲು ಅನುಭವಿಸಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಚೆನ್ನೈ ಪರ ಆಲ್‌ರೌಂಡರ್ ಸ್ಯಾಮ್ ಕರನ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು ಪಂಜಾಬ್ ಬೌಲರ್ಸ್‌ಗೆ ಬೆವರಿಳಿಸಿದರು. ಅವರು 47 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 88 ರನ್ ಗಳಿಸಿದರು. ಈ ಮೂಲಕ ಅವರು ತಂಡದ ಸ್ಕೋರ್ ಅನ್ನು 200 ರತ್ತ ಕೊಂಡೊಯ್ಯುತ್ತಿದ್ದರೂ, ಆದರೆ ಯುಜ್ವೇಂದ್ರ ಚಹಾಲ್ ಅವರ ಹ್ಯಾಟ್ರಿಕ್ ವಿಕೆಟ್ ಚೆನ್ನೈ ತಂಡವನ್ನು ಕೇವಲ 190 ರನ್‌ಗಳಿಗೆ ಆಲೌಟ್ ಮಾಡಿತು.

ಚೆಪಾಕ್‌ನಲ್ಲಿ ಯುಜ್ವೇಂದ್ರ ಚಹಾಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದಲ್ಲಿ ಎರಡನೇ ಹ್ಯಾಟ್ರಿಕ್ ಆಗಿದೆ. ಯುಜ್ವೇಂದ್ರ ಚಹಾಲ್ 19ನೇ ಓವರ್‌ನಲ್ಲಿ ತಮ್ಮ ಮೂರನೇ ಓವರ್ ಬೌಲಿಂಗ್ ಮಾಡಿದರು. ಅವರು ಮೊದಲು ಎಂಎಸ್ ಧೋನಿ ಅವರನ್ನು ಔಟ್ ಮಾಡಿದರು. ಇದಾದ ನಂತರ ಅವರು ಹಿಂತಿರುಗಿ ನೋಡಲಿಲ್ಲ. ಇಡೀ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಧೋನಿ ನಂತರ, ಅವರು ದೀಪಕ್ ಹೂಡಾ, ನೂರ್ ಅಹ್ಮದ್ ಮತ್ತು ಅನ್ಶುಲ್ ಕಾಂಬೋಜ್ ಅವರ ವಿಕೆಟ್‌ಗಳನ್ನು ಪಡೆದರು. ಪಂಜಾಬ್ ಕಿಂಗ್ಸ್ ಪರ ಯುಜ್ವೇಂದ್ರ ಚಹಾಲ್ 3 ಓವರ್‌ಗಳಲ್ಲಿ 32 ರನ್‌ಗಳಿಗೆ 4 ವಿಕೆಟ್ ಕಬಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಮ್ ಕರನ್ ಅಬ್ಬರದ ನೆರವಿನಿಂದ ತವರಿನಲ್ಲಿ ಬಿಗ್ ಸ್ಕೋರ್ ಕಲೆ ಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಚೆನ್ನೈ ತಂಡ ರನ್ ವೇಗಕ್ಕೆ ಯುಜ್ವೇಂದ್ರ ಚಹಾಲ್ ಬ್ರೇಕ್ ಹಾಕಿದರು. ಪರಿಣಾಮ ಚೆನ್ನೈ ತಂಡ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಪಂಜಾಬ್ ಗೆಲುವಿನ ಗುರಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಯಿತು.
ಪಂಜಾಬ್ ಪರ ಪ್ರಭ್ಸಿಮ್ರಾನ್ ಮತ್ತು ಪ್ರಿಯಾಂಶ್ ಆರ್ಯ ಇನ್ನಿಂಗ್ಸ್ ಆರಂಭಿಸಿದರು. ಪ್ರಿಯಾಂಶ್ 23 ರನ್ ಗಳಿಸಿ ಔಟಾದರು. ಪ್ರಭಾಸಿಮ್ರನ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 54 ರನ್ ಗಳಿಸಿ ಅರ್ಧಶತಕ ಗಳಿಸಿದರು. ಅವರಲ್ಲದೆ ನಾಯಕ ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಗಳಿಸಿದರು. ಅಯ್ಯರ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 74 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಚೆನ್ನೈ ಪರ ಖಲೀಲ್ ಅಹ್ಮದ್ ಮತ್ತು ಮಥಿಶಾ ಪತಿರಾನ ತಲಾ 2 ವಿಕೆಟ್ ಪಡೆದರೆ, ನೂರ್ ಅಹ್ಮದ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ 190 ರನ್ ಗಳಿಸಲು ಸ್ಯಾಮ್ ಕರನ್ ಅವರ ಅದ್ಭುತ ಇನ್ನಿಂಗ್ಸ್ ಮರೆಯುವಂತಿಲ್ಲ. ಸಿಎಸ್‌ಕೆ ಪರ ಸ್ಯಾಮ್ ಕರನ್ ಅತಿ ಹೆಚ್ಚು ರನ್ ಗಳಿಸಿದರು. ಕರನ್ 47 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 88 ರನ್ ಗಳಿಸಿದರು. ಅವರಲ್ಲದೆ, ಡೆವಾಲ್ಡ್ ಬ್ರೆವಿಸ್ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 32 ರನ್ ಗಳಿಸಿದರು. ಹೀಗಾಗಿ ಚೆನ್ನೈ ಸವಾಲಿನ ಮೊತ್ತ ಕಲೆ ಹಾಕಿತು. ಪಂಜಾಬ್ ಕಿಂಗ್ಸ್ ಪರ ಚಹಾಲ್ ಹೊರತುಪಡಿಸಿ, ಮಾರ್ಕೊ ಜಾನ್ಸೆನ್ ಮತ್ತು ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.