ಮುಂಬೈ ಇಂಡಿಯನ್ಸ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಮೋಘ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡರೂ ಸಹ ಭರವಸೆಯ ಬೆಳಕು ಒಂದು ಕಾಣಿಸಿಕೊಂಡಿದೆ. ಚೆನ್ನೈ ತಂಡದ ವಿರುದ್ದದ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಆ ಯುವ ಆಟಗಾರ ನಿಜಕ್ಕೂ ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಕಾಟ ನೀಡಿದರು.
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ 19.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಈ ವೇಳೆ ಮುಂಬೈ ತಂಡದ ಯುವ ಚೈನಾ ಮೆನ್ ಬೌಲರ್ ಎಲ್ಲರ ಗಮನ ಸೆಳೆದರು. 23 ವರ್ಷದ ವಿಘ್ನೇಶ್ ಪುತ್ತೂರು ತಮ್ಮ ಬಿಗುವಿನ ದಾಳಿಯಿಂದ ಆಕರ್ಷಿಸಿದರು.

ಯುವ ಚೈನಾ ಮೆನ್ ಬೌಲರ್ ಮೊದಲು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಪಡೆದರು. ಅರ್ಧಶತಕ ಬಾರಿಸಿ ಮುನ್ನುಗುತ್ತಿದ್ದ ರುತುರಾಜ್‌ಗೆ ವಿಘ್ನೇಶ್ ಖೆಡ್ಡಾ ತೋಡಿದರು. ಮುಂದಿನ ಓವರ್‌ನಲ್ಲಿ ಶಿವಂ ದುಬೆ ಸಹ ಇವರ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಮುಂದಾಗಿ ಬೌಂಡರಿ ಲೈನ್‌ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಮಧ್ಯಮ ಕ್ರಮಾಂಕದ ಇನ್ನೋರ್ವ ಆಟಗಾರ ದೀಪಕ್ ಹೂಡಾ ಅವರಿಗೆ ಇವರು ಕಾಟ ನೀಡಿ ಪೆವಿಲಿಯನ್ ಹಾದಿ ತೋರಿಸಿದ್ರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡ ವಿಘ್ನೇಶ್ ಮಿಂಚಿದರು.
ಕೇರಳ ಮೂಲದ ವಿಘ್ನೇಶ್ ಪುತ್ತೂರು ಬಲಗೈ ಬ್ಯಾಟರ್ ಹಾಗೂ ಎಡಗೈ ಸ್ಪಿನ್ ಬೌಲರ್. ಇವರು ಕೇರಳ ಪರ ಹಲವು ವಯೋಮಿತ ತಂಡಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಇನ್ನು ಕೇರಳ ರಾಜ್ಯದ ಪರ ಆಡುವ ಅವಕಾಶ ಪಡೆದಿಲ್ಲ. ಭಾನುವಾರ ತಮ್ಮ ವೃತ್ತಿ ಜೀವನದ ಮೊದಲ ಟಿ20 ಪಂದ್ಯವನ್ನು ಇವರು ಆಡಿದ್ದಾರೆ. ಇವರನ್ನು ಮುಂಬೈ ಇಂಡಿಯನ್ಸ್ ಮೆಗಾ ಹರಾಜಿನಲ್ಲಿ ಆಯ್ಕೆ ಮಾಡಿದಾಗಲೇ ಎಲ್ಲರ ಚಿತ್ತ ಕದ್ದ ಪ್ಲೇಯರ್. ಇವರು 2001, ಮಾರ್ಚ್ 2 ರಂದು ಜನಿಸಿದರು. ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ.

ವಿಘ್ನೇಶ್ ಬೆಳವಣಿಗೆ ಹಿಂದೆ ಅವರ ಒಂದು ಒಂದು ಬೆವರ ಹನಿಯ ಕಥೆ ಇದೆ. ಆರ್ಥಿಕ ಸವಾಲುಗಳನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ವಿಘ್ನೇಶ್ ಕ್ರೀಡೆಯ ಮೇಲೆ ತನ್ನ ಪ್ರೀತಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ಇದಕ್ಕೆ ತಂದೆ ತಾಯಿ ಕೊಡುಗೆ ಸಹ ಅಪಾರ. ತಂದೆ ಸುನಿಲ್ ಕುಮಾರ್ ಆಟೋ ಚಾಲಕರಾಗಿದ್ದರೆ, ತಾಯಿ ಕೆ.ಪಿ. ಬಿಂದು ಗೃಹಿಣಿ.
ವಿಘ್ನೇಶ್ ಪೆರಿಂಥಲ್ಮನ್ನಾದ ಪೇಟಿಎಂ ಸರ್ಕಾರಿ ಕಾಲೇಜಿನಲ್ಲಿ ಸಾಹಿತ್ಯದಲ್ಲಿ ಎಂ ಎ ಪದವಿ ಓದುತ್ತಿರುವ ಯುವ ಪ್ರತಿಭೆ. ಇವರು ಕ್ರೀಡೆ ಹಾಗೂ ಓದಿಗೆ ಸಮಾನವಾದ ಇಂಪಾರ್ಟೆಂಟ್ ನೀಡುತ್ತಿದ್ದಾರೆ.