ಅಂತೂ ವಿರಾಟ್ ಕೊಹ್ಲಿ ಕೈ ಜಾರಿತು ODI ನಾಯಕತ್ವ: ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ BCCI

ಅಂದುಕೊಂಡಂತೆ ಎಲ್ಲವೂ ನಡೆದು ಹೋಗಿದೆ.. ಟೀಂ ಇಂಡಿಯಾ ಏಕದಿನ ಫಾರ್ಮೆಟ್ ನಾಯಕತ್ವವನ್ನೂ ವಿರಾಟ್ ಕೊಹ್ಲಿ ಕಳೆದುಕೊಂಡಿದ್ದಾರೆ. ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಇನ್ಮುಂದೆ ನಡೆಯಲಿದೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹವಾ.
ಹೌದು ಟೀಂ ಇಂಡಿಯಾದಲ್ಲಿ ಇನ್ಮುಂದೆ ರೋಹಿತ್ ಶರ್ಮಾದ್ದೇ ಮಾತು ನಡೆಯಲಿದೆ. ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ, ಇದೀಗ ಬಿಸಿಸಿಐ ಒತ್ತಡಕ್ಕೆ ಮಣಿದು ಏಕದಿನ ನಾಯಕತ್ವವನ್ನು ಒಲ್ಲದ ಮನಸ್ಸಿನಲ್ಲಿ ಬಿಟ್ಟುಕೊಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಲವು ದಿನಗಳಿಂದ ಕೊಹ್ಲಿ ಮೇಲಿರುವ ಜವಾಬ್ದಾರಿಯನ್ನ ತಗ್ಗಿಸಲು ಚಿಂತನೆ ನಡೆಸುತ್ತಲೇ ಇತ್ತು. ಅನೇಕ ಬಿಸಿಸಿಐ ಮೂಲಗಳು ಸಹ ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್‌ನಲ್ಲೂ ನಾಯಕತ್ವ ಬಿಟ್ಟುಕೊಡುವುದನ್ನು ಎದುರು ನೋಡುತ್ತಿದೆ ಎಂದು ವರದಿಯಾಗಿತ್ತು. ಕೊನೆಗೂ ಆ ಮಾತು ನಿಜವಾಗಿದೆ. ಟಿ20, ಏಕದಿನ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಾಯಕನಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಮುನ್ನಡೆಯಲಿದೆ.

ಓಡಿಐ ನಾಯಕತ್ವ ಬಿಟ್ಟುಕೊಟ್ಟ ವಿರಾಟ್
ಏಕದಿನ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳ ಒಡೆಯನಾದ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಗಳನ್ನ ಹೊರತುಪಡಿಸಿ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಟಿ20 ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಕೇವಲ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ನಾಯಕನಾಗಿ ತಂಡವನ್ನ ಹೆಬ್ಬುಲಿಯಂತೆ ಮುನ್ನಡೆಸಿದ್ದ ಕೊಹ್ಲಿ ಇನ್ಮುಂದೆ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಆಟಗಾರನಾಗಿ ಅಷ್ಟೇ ಕಾಣಬಹುದು.

ಕೊಹ್ಲಿ ನಾಯಕತ್ವವನ್ನ ಬಿಸಿಸಿಐ ಏಕೆ ಕಸಿದುಕೊಂಡಿತು?
ಕೊಹ್ಲಿ ಓಡಿಐ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಬಯಸುತ್ತಿದೆ ಎಂದು ಈ ಹಿಂದೆಯೇ ಹಲವು ವರದಿಗಳು ಹರಿದಾಡಿದ್ದವು. ಭಾರತೀಯ ಕ್ರಿಕೆಟ್ ಮಂಡಳಿಯು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಆತ ನಾಯಕತ್ವದಿಂದ ಕೆಳಗಿಳಿಯುವುದು ಒಳ್ಳೆಯದು ಎಂಬ ಯೋಜನೆಯಲ್ಲಿ ಈ ಗುರಿ ತಲುಪಿದೆ. ಜೊತೆಗೆ ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್‌ಗೆ ಒಬ್ಬನೇ ನಾಯಕನನ್ನ ನಿಯೋಜಿಸುವ ಸಲುವಾಗಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ನಾಯಕತ್ವ ಕೈ ತಪ್ಪಿತು!
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತದ ಏಕದಿನ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನವೇ ಕೊಹ್ಲಿಯ ಏಕದಿನ ನಾಯಕತ್ವದ ಭವಿಷ್ಯ ನಿರ್ಧಾರವಾಗಿದೆ. ಏಕೆಂದರೆ 2023 ರ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ಮತ್ತು ಮುನ್ನಡೆಸಲು ರೋಹಿತ್‌ಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ನಂಬಿದ್ದಾರೆ.

2023ರ ವಿಶ್ವಕಪ್ ಮೇಲೆ ಬಿಸಿಸಿಐ ಟಾರ್ಗೆಟ್
ಹೌದು, ಮುಂಬರುವ ಏಕದಿನ ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣಟ್ಟಿದೆ. ಈಗಲೇ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನ ನಾಯಕ ಸ್ಥಾನದಲ್ಲಿ ಕೂರಿಸೋದ್ರಿಂದ, ತಂಡವು ಸಿದ್ಧಗೊಳ್ಳಲು ಸಹಾಯವಾಗುತ್ತದೆ. ಜೊತೆಗೆ ರೋಹಿತ್ ಶರ್ಮಾ ಕೂಡ ನಾಯಕತ್ವದ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಸಾಧ್ಯ ಎನ್ನುವುದು ಬಿಸಿಸಿಐ ಮುಂದಾಲೋಚನೆಯಾಗಿದೆ.

ರೋಹಿತ್‌ಗೆ ನಾಯಕತ್ವ ಹಸ್ತಾಂತರವನ್ನ ಬಯಸಿದ್ರಾ ದ್ರಾವಿಡ್?
ವಾಸ್ತವವಾಗಿ, ಭಾರತದ ಹೊಸ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನ್ಯೂಜಿಲೆಂಡ್ ವಿರುದ್ಧದ ಟಿ20 ಅಂತರಾಷ್ಟ್ರೀಯ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರಿಗೆ ಸಂಪೂರ್ಣ ವೈಟ್ ಬಾಲ್ ನಾಯಕತ್ವವನ್ನು ಹಸ್ತಾಂತರಿಸಲು ಬಯಸಿದ್ದರು ಎಂಬ ಮಾತುಗಳು ಹರಿದಾಡಿವೆ.
ಭಾರತವು ಮೂರು ಟೆಸ್ಟ್ ಪಂದ್ಯಗಳನ್ನು ಹಾಗೂ ಓಡಿಐ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಲಿದೆ. ಮೊದಲ ಟೆಸ್ಟ್ ಡಿಸೆಂಬರ್ 26 ರಂದು ಪ್ರಾರಂಭವಾಗುತ್ತದೆ. ಈ ಮೊದಲು ವೇಳಾಪಟ್ಟಿಯ ಪ್ರಕಾರ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ 9 ದಿನಗಳ ಮೊದಲು (ಡಿಸೆಂಬರ್ 17) ಪ್ರಾರಂಭವಾಗಬೇಕಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications