
ಮುಂಬೈ, ಮೇ 3: ಸಮಬಲಗೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ ಪಂದ್ಯ, ಸೂಪರ್ ಓವರ್‌ನಲ್ಲಿ ಎಂಐಗೆ ರೋಚಕ ಗೆಲುವು ತಂದಿತ್ತು. ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಗುರುವಾರ (ಮೇ 2) ನಡೆದ ಪಂದ್ಯ 2019ರ ಐಪಿಎಲ್‌ನಲ್ಲಿ 2ನೇ ಸೂಪರ್ ಓವರ್ ಪಂದ್ಯವಾಗಿ ಗುರುತಿಸಿಕೊಂಡಿತ್ತು.
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅರ್ಧಶತಕ (69 ರನ್) ನೆರವಿನಿಂದ ಮುಂಬೈ 162 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್ ಗೆಲುವಿನ ಪರ ಕನ್ನಡಿಗ ಮನೀಶ್ ಪಾಂಡೆ ಸ್ಫೋಟಕ ಅರ್ಧಶತಕದ (71 ರನ್) ಕೊಡುಗೆಯಿತ್ತರು. ಕೊನೆಯ ಏಸೆತಕ್ಕೆ ಎಸ್‌ಆರ್‌ಎಚ್‌ಗೆ 7 ರನ್‌ಗಳ ಅವಶ್ಯಕತೆಯಿತ್ತು. ಪಾಂಡೆ ಸಿಕ್ಸ್ ಚಚ್ಚಿದರು. ಪಂದ್ಯ ಸೂಪರ್ ನತ್ತ ತಿರುಗಿತು.
ಸೂಪರ್ ಓವರ್‌ನಲ್ಲಿ ಹೈದರಾಬಾದ್ ಬಿರುಸಿನ ಬ್ಯಾಟಿಂಗ್ ನಡೆಸಲಿಲ್ಲ. ಒಂದೇ ಓವರ್‌ನ ವಿಸ್ತೃತ ಆಟವನ್ನು ವೇಗಿ ಜಸ್‌ಪ್ರೀತ್ ಬೂಮ್ರಾ ಹತೋಟಿಗೆ ತೆಗೆದುಕೊಂಡರು. ಎಸ್‌ಆರ್‌ಎಚ್ 8 ರನ್ ಬಾರಿಸಿತು. ಮುಂಬೈ ಆಟದ ವೇಳೆ ಮೊದಲ ಎಸೆತಕ್ಕೆ ಹಾರ್ದಿಕ್ ಪಾಂಡ್ಯ ಸಿಕ್ಸ್ ಬಾರಿಸಿದರು. ಅಂತೂ ಮುಂಬೈ 3 ಎಸೆತಗಳಲ್ಲಿ 9 ರನ್ ಪೂರೈಸಿತು.
ಸೂಪರ್ ಓವರ್‌ನಲ್ಲಿ ರೋಚಕ ಗೆಲುವಿನಿಂದ 2019ರ ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶಿಸಿದ 3ನೇ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿತಲ್ಲದೆ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೆಳಜಗ್ಗಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಮುಂಬೈ ದ್ವಿತೀಯ ಸ್ಥಾನಕ್ಕೆ ಜಿಗಿಯಲು ಮುಖ್ಯ ಕಾರಣ ಸೂಪರ್ ಓವರ್‌ನ ರೋಚಕ ಗೆಲುವು. ಯಾಕೆಂದರೆ ಈ ಜಯದಿಂದಾಗಿ ಮುಂಬೈ ನೆಟ್ ರನ್‌ರೇಟ್ ಗಣನೀಯ ಏರಿಕೆ ಕಂಡಿದೆ, ಅಲ್ಲದೆ ಅಂಕಪಟ್ಟಿಯಲ್ಲಿ ಡೆಲ್ಲಿ ತಂಡದ ದ್ವಿತೀಯ ಸ್ಥಾನವನ್ನು ಮುಂಬೈ ಕಸಿದುಕೊಂಡಿದೆ. ಮುಂಬೈ ಸದ್ಯ +0.321 ರನ್‌ರೇಟ್ ಹೊಂದಿದ್ದರೆ, ತೃತೀಯ ಸ್ಥಾನದಲ್ಲಿರುವ ಡೆಲ್ಲಿ ಖಾತೆಯಲ್ಲಿ -0.096 ರನ್ ರೇಟ್ ಇದೆ.