ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಪ್ರಸ್ತಿತ ಟಿ20 ಸರಣಿಯನ್ನು ಆಡಿತ್ತಿದೆ. ಈ ಪ್ರವಾಸದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಇಬ್ಬರು ಆಟಗಾರರು ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಯಶಸ್ವಿ ಜೈಸ್ವಾಲ್ ಹಾಗು ತಿಲಕ್ ವರ್ಮಾ. ಯಶಸ್ವಿ ಜೈಸ್ವಾಲ್ ಟೆಸ್ಟ್ ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆಇದ್ದು ನಂತರ ಟಿ20 ಯಲ್ಲಿಯೂ ಒಂದು ಪಂದ್ಯವನ್ನು ಆಡಿದ್ದಾರೆ. ಇನ್ನು ತಿಲಕ್ ವರ್ಮಾ ಟಿ20 ಸರಣಿಯಲ್ಲಿ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿ ದೊಡ್ಡ ಮಟ್ಟದ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಈ ಇಬ್ಬರು ಯುವ ಆಟಗಾರರಿಂದ ಭಾರತ ತಂಡ ಮತ್ತಷ್ಟು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದೆ ಎನ್ನುವ ವಿಚಾರವನ್ನು ತಂಡದ ಬೌಲಿಂಗ್ ಕೋಚ್ ಪರಾಸ್ ಎಮ್ಹಾಂಬ್ರೆ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿರುವ ಈ ಇಬ್ಬರು ಆಟಗಾರರಿ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಿಗಾಗಿ ಮುಂದಿನ ಪಂದ್ಯಗಳಲ್ಲಿ ಕನಿಷ್ಠ ಒಂದು ಓವರ್ ಬೌಲಿಂಗ್ ಮಾಡಲು ಸಾಧ್ಯವಿದೆಯೇ ಎನ್ನುವತ್ತ ಚಿತ್ತಹರಿಸಲಾಗುತ್ತಿದೆ ಎಂದಿದ್ದಾರೆ ಪರಾಸ್.

ತಿಲಕ್ ವರರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯಲ್ಲಿ ನೀಡುತ್ತಿರುವ ಪ್ರಬುದ್ಧ ಪ್ರದರ್ಶನ ಎಲ್ಲರ ಗಮನಸೆಳೆಯುತ್ತಿದೆ. ಆಡಿರುವ ಮೂರು ಪಂದ್ಯಗಳಲ್ಲಿ 69.50 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ತಿಲಕ್ ವರ್ಮಾ 139.00 ಸ್ಟ್ರೈಕ್ ರೇಟ್‌ನಲ್ಲಿ 139 ರನ್ ಗಳಿಸಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ಚೊಚ್ಚಲ ಟಿ20I ಅರ್ಧಶತಕವನ್ನು ಬಾರಿಸಿದ್ದು ಅಂತಿಮ ಪಂದ್ಯದಲ್ಲಿ ಅಜೇಯ 49 ರನ್‌ಗಳಿಸಿದ್ದರು.
ಮತ್ತೊಂದೆಡೆ ಜೈಸ್ವಾಲ್ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ ಒಂದು ರನ್‌ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಸಿದ್ದಾರೆ. ಆದರೆ ಟಿ20 ಮಾದರಿಯಲ್ಲಿ ಜೈಸ್ವಾಲ್ ತನ್ನ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿದ್ದು ಕಳೆದ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 625 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದರು. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಜೈಸ್ವಾಲ್ ಚೊಚ್ಚ ಪಂದ್ಯದಲ್ಲಿಯೇ ಬೃಹತ್ ಶತಕ ಸಿಡಿಸಿ ದಾಖಲೆ ಬರೆದಿದ್ದು ಅಮೋಘ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ಬೌಲಿಂಗ್‌ನಲ್ಲಿ ತಿಲಕ್ ವರ್ಮಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂಬತ್ತು ಪಂದ್ಯಗಳಿಂದ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದು 25 ಲಿಸ್ಟ್ ಎ ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಜೈಸ್ವಾಲ್ ಪ್ರಥಮ ದರ್ಜೆ ಪಂದ್ಯಗಳಲ್ಲಿ ವಿಕೆಟ್ ಪಡೆದುಕೊಳ್ಳದಿದ್ದರೂ 32 ಲಿಸ್ಟ್ ಎ ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಹೊಂದಿದ್ದಾರೆ.
ಹಾಗಿದ್ದರೂ ಭಾರತದ ಬೌಲಿಂಗ್ ಕೋಚ್ ಪರಾಸ್ ಇಬ್ಬರು ಆಟಗಾರರು ಕೂಡ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಬೌಲಿಂಗ್‌ನಲ್ಲಿಯೂ ನೆರವಾಗಬಹುದು ಎಂದಿದ್ದಾರೆ. ಫ್ಲೋರಿಡಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 4 ನೇ ಟಿ 20 ಐಗೆ ಮುಂಚಿತವಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೋಚ್ ಮುಂಬರುವ ಪಂದ್ಯಗಳಲ್ಲಿ ತಿಲಕ್ ಮತ್ತು ಜೈಸ್ವಾಲ್ ಕನಿಷ್ಠ ಒಂದು ಓವರ್ ಬೌಲಿಂಗ್ ಮಾಡುವುದನ್ನು ನಾವು ನೋಡಬಹುದು ಎಂದು ಹೇಳಿದ್ದಾರೆ.
"ಯಾರಾದರೂ ತಂಡಕ್ಕೆ ವಿಶೇಷ ಕೊಡುಗೆ ನೀಡಲು ಸಾಧ್ಯವಿದೆ ಎಂದರೆ ಅದು ನಿಜಕ್ಕೂ ಖುಷಿಯ ವಿಚಾರ. ತಿಲಕ್ ಮತ್ತು ಯಶಸ್ವಿ ಅಂಡರ್ 19 ಸಮಯಗಳಿಂದಲೂ ಬೌಲಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಅವರಿಬ್ಬರಲ್ಲೂ ಉತ್ತಮ ಬೌಲರ್‌ಗಳಾಗುವ ಸಾಮರ್ಥ್ಯವಿದೆ. ಈ ಹಂತದಲ್ಲಿ ಅವರು ತಮ್ಮ ಬೌಲಿಂಗ್ ಮೇಲೆಯೂ ಕರ್ತವ್ಯ ನಿರ್ವಹಿಸಬಹುದು. ಇಂಥಾ ಆಯ್ಕೆಗಳು ಇದ್ದಾಗ ಅದು ಬಹಳ ನೆರವಾಗಲಿದೆ.ಅವರು ಬೌಲಿಂಗ್ ಮಾಡುವುದನ್ನು ನಾವು ಸದ್ಯದಲ್ಲಿಯೇ ನೋಡಲಿದ್ದೇವೆ ಹಾಗೂ ಅದರತ್ತ ನಾವು ಕೆಲಸ ಮಾಡುತ್ತಿದ್ದೇವೆ. ಅದು ಸಾಕಷ್ಟು ಸಮಯ ತೆಗೆದುಕೊಂಡರೂ ಕನಿಷ್ಠ ಒಂದು ಓವರ್‌ಗಳ ಬೌಲಿಂಗ್ ಮಾಡುವುದನ್ನು ಸದ್ಯದಲ್ಲಿಯೇ ನೋಡಬಹುದು" ಎಂದಿದ್ದಾರೆ ಪರಾಸ್.