ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಏಕದಿನ ಸರಣಿಯ ಬಳಿಕ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗೆ ವೆಸ್ಟ್ ಇಂಡಿಸ್ ತನ್ನ ಬಲಿಷ್ಠ ಆಟಗಾರರ ತಂಡವನ್ನು ಪ್ರಕಟಿಸಿದ್ದು ಚುಟುಕು ಸರಣಿಯಲ್ಲಿ ಭಾರತಕ್ಕೆ ಠಕ್ಕರ್ ನೀಡಲು ಸಜ್ಜಾಗಿದೆ. ಅನುಭವಿ ಹಾಗೂ ಯುವ ಆಟಗಾರ ಸಮತೋಲಿತ ತಂಡವಾಗಿ ಕಾಣಿಸುತ್ತಿದೆ ಈ ತಂಡ.
ಏಕದಿನ ಮಾದರಿಯಲ್ಲಿ ನಾಯಕನಾಗಿರುವ ಶಾಯ್ ಹೋಪ್ ಹಾಗೂ ವೇಗದ ಬೌಲರ್ ಓಶಾನೆ ಥೋಮಸ್ ಈ ತಂಡಕ್ಕೆ ಮರಳಿರುವ ಪ್ರಮುಖ ಆಟಗಾರರಾಗಿದ್ದಾರೆ. ಶಾಯ್ ಹೋಪ್ ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರೂ ಟಿ20 ಮಾದರಿಯಲ್ಲಿ ಹಿಂದಿನ ವರ್ಷದ ಫೆಬ್ರವರಿ ತಿಂಗಳಿನಿಂದ ತಂಡದಿಂದ ಬೇರ್ಪಟ್ಟಿದ್ದರು. ಥೋಮಸ್ ಅವರು 2021ರ ಬಳಿಕ ಮೊದಲ ಬಾರಿಗೆ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ವಿರುದ್ಧ ಈ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಅನುಭವಿ ಬ್ಯಾಟರ್ ರೋವ್ಮನ್ ಪೋವೆಲ್ ಹೆಗಲಿಗೆ ಬಿದ್ದಿದೆ. ಬಲಿಷ್ಠ ಬ್ಯಾಟರ್‌ಗಳ ಲೈನಪ್‌ಅನ್ನು ಈ ಟಿ20 ತಂಡ ಹೊಂದಿದ್ದು ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಶಿಮ್ರಾನ್ ಹೇಟ್ಮೇಯರ್ ಮತ್ತು ಕೇಲ್ ಮೇಯರ್ಸ್ ಅವರಂತಾ ಸ್ಪೋಟಕ ಆಟಗಾರರ ದಂಡೇ ಈ ತಂಡದಲ್ಲಿ ಇದೆ.
ಇನ್ನು ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಅರ್ಜತೆ ಕಳೆದುಕೊಂಡಿರುವ ವೆಸ್ಟ್ ಇಂಡೀಸ್ ತಂಡ ತನ್ನ ಸಂಪೂರ್ಣ ಚಿತ್ತವನ್ನು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನತ್ತ ನೆಟ್ಟಿರುವುದು ಸ್ಪಷ್ಟವಾಗಿದೆ. ಅದಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಈ ಸರಣಿಯಿಂದಲೇ ಆರಂಭಿಸಿಕೊಂಡಂತಿದ್ದು ಬಲಿಷ್ಠವಾಗಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಪ್ರಯತ್ನದಲ್ಲಿದೆ. ಮುಂದಿನ ವರ್ಷ ನಡೆಯುವ ಈ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಆತಿಥ್ಯದಲ್ಲಿಯೇ ನಡೆಯಲಿದೆ ಎಂಬುದು ಮತ್ತೊಂದು ಗಮನಾರ್ಹ ಅಂಶ.
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್, ಓಶೇನ್ ಥಾಮಸ್
ಭಾರತ ಟಿ20 ತಂಡ: ಇಶಾನ್ ಕಿಶನ್, ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್.