
ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಪ್ರಯತ್ನಿಸುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ರವೀಂದ್ರ ಜಡೇಜಾ ಅವರು ಬಿಸಿಸಿಐ ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.
ರವೀಂದ್ರ ಜಡೇಜಾ ಅವರು ಪಾಕಿಸ್ತಾನ ವಿರುದ್ಧದ ಗ್ರೂಪ್ ಹಂತದ ಗೆಲುವಿನಲ್ಲಿ 35 ರನ್‌ಗಳ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಆದರೆ ಆ ಪಂದ್ಯದ ನಂತರ ಅವರು ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಗುಳಿದರು ಮತ್ತು ಭಾರತ ತಂಡ ಅವರ ಆಲ್‌ರೌಂಡ್ ಆಟವನ್ನು ಕಳೆದುಕೊಂಡಿದೆ.
"ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ಹೇಳಲು ಅನೇಕ ಜನರಿದ್ದಾರೆ. ಬಿಸಿಸಿಐ, ಭಾರತ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಫಿಸಿಯೋಗಳು, ವೈದ್ಯರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಶೀಘ್ರದಲ್ಲೇ ನನ್ನ ಪುನಶ್ಚೇತನವನ್ನು ಪ್ರಾರಂಭಿಸುತ್ತೇನೆ ಮತ್ತು ನಾನು ಸಾಧ್ಯವಾದಷ್ಟು ಬೇಗ ಕ್ರಿಕೆಟ್‌ಗೆ ಮರಳಲು ಪ್ರಯತ್ನಿಸುತ್ತೇನೆ. ನಿಮ್ಮ ಶುಭ ಹಾರೈಕೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು," ಎಂದು ರವೀಂದ್ರ ಜಡೇಜಾ Instagramನಲ್ಲಿ ಬರೆದುಕೊಂಡಿದ್ದಾರೆ.
ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದ ಮೊದಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ರವೀಂದ್ರ ಜಡೇಜಾ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ, ಈ ವರ್ಷದ ನಂತರ ಐಸಿಸಿ ಟಿ20 ವಿಶ್ವಕಪ್‌ನಿಂದ ಅವರನ್ನು ಹೊರಗಿಡುವುದು ಅಸಾಧ್ಯ, ತುಂಬಾ ಬೇಗ ಮರಳಲಿದ್ದಾರೆ ಎಂದು ಹೇಳಿದ್ದರು.
"ರವೀಂದ್ರ ಜಡೇಜಾ ಅವರ ಮೊಣಕಾಲಿಗೆ ಗಾಯವಾಗಿದೆ, ಅವರು ಏಷ್ಯಾ ಕಪ್‌ನಿಂದ ಹೊರಗುಳಿಯುತ್ತಾರೆ," ಎಂದು ಪಾಕಿಸ್ತಾನದ ವಿರುದ್ಧ ಭಾರತದ ಸೂಪರ್ 4 ಪಂದ್ಯದ ಮೊದಲು ರಾಹುಲ್ ದ್ರಾವಿಡ್ ಹೇಳಿದರು.
"ಅವರು ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ, ಅವರು ವೈದ್ಯರನ್ನು ನೋಡಲು ಹೋಗುತ್ತಿದ್ದಾರೆ. ತಜ್ಞರನ್ನು ನೋಡಲು ಹೋಗುತ್ತಿದ್ದಾರೆ. ವಿಶ್ವಕಪ್ ಇನ್ನೂ ಸ್ವಲ್ಪ ದೂರದಲ್ಲಿದೆ ಮತ್ತು ನಾವು ಯಾವುದೇ ತೀರ್ಮಾನಗಳಿಗೆ ಸದ್ಯಕ್ಕೆ ಬರುವುದು ಸೂಕ್ತವಲ್ಲ," ಎಂದಿದ್ದರು.
"ಗಾಯಗಳು ಕ್ರೀಡೆಯ ಒಂದು ಭಾಗವಾಗಿದೆ. ಅವುಗಳನ್ನು ನಿರ್ವಹಿಸಲು ಪ್ರಯತ್ನಿಸುವುದು ನಮ್ಮ ಕೆಲಸದ ಭಾಗವಾಗಿದೆ. ಬಹಳಷ್ಟು ಪುನರ್ವಸತಿ ಮತ್ತು ಗಾಯದ ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಜಡೇಜಾರನ್ನು ಹೊರಗಿಡಲು ಬಯಸುವುದಿಲ್ಲ. ವಿಶೇಷವಾಗಿ ವಿಶ್ವಕಪ್‌ಗೆ ಈಗ ಆರು ಅಥವಾ ಏಳು ವಾರಗಳ ದೂರವಿರುವ ಕಾರಣ ನಾವು ಹೆಚ್ಚು ಸ್ಪಷ್ಟವಾಗಿದ್ದೇವೆ," ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.