
ನವದೆಹಲಿ, ಜುಲೈ 14: ಎಂಎಸ್ ಧೋನಿ ನಿವೃತ್ತಿ ಹೇಳ್ತಾರಾ? ಧೋನಿ ನಿವೃತ್ತಿ ನೀಡಲ್ವಾ? ನಿವೃತ್ತಿ ಹೇಳೋದಾದ್ರೆ ಯಾವಾಗ ಹೇಳ್ತಾರೆ? ಇವೇ ಪ್ರಶ್ನೆಗಳು ಈಗ ಕ್ರಿಕೆಟ್ ವಲಯದಲ್ಲಿ ಹೆಚ್ಚು ಓಡಾಡುತ್ತಿವೆ. ಧೋನಿ ನಿವೃತ್ತಿ ನೀಡಲಿ, ಬಿಡಲಿ ಮುಂದಿನ ಐಪಿಎಲ್‌ನಲ್ಲಂತೂ ಆಡುತ್ತಿದ್ದಾರೆ. ಇದನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೇಳಿಕೊಂಡಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 18 ರನ್ ಸೋಲು ಕಂಡ ಬಳಿಕ ಧೋನಿ ನಿವೃತ್ತಿ ಗುಸುಗುಸು ಜೋರಾಗಿತ್ತು. ಆ ಪಂದ್ಯದ ಬಳಿಕ ಕೂಲ್ ಕ್ಯಾಪ್ಟನ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈವರೆಗೂ ಈ ವಿಚಾರ ಖಾತರಿಗೊಂಡಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಆಡುವ ಬಗ್ಗೆ ಮಿರರ್ ಜೊತೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿಗಳು, 'ಧೋನಿ ನಿವೃತ್ತಿ ಬಗ್ಗೆ ಗಾಳಿ ಸುದ್ದಿಗಳು ಏನೇ ಇರಲಿ, ಅವರು ಮುಂದಿನ ಐಪಿಎಲ್‌ನಲ್ಲಂತೂ ಸಿಎಸ್‌ಕೆ ಪರ ಆಡುತ್ತಿದ್ದಾರೆ' ಎಂದಿದ್ದಾರೆ.
ಈಗಾಗಲೇ ಧೋನಿ ಐಪಿಎಲ್‌ನಲ್ಲಿ 10 ಆವೃತ್ತಿಗಳಲ್ಲಿ ಸಿಎಸ್‌ಕೆ ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. ಅಲ್ಲದೆ ಸಿಎಸ್‌ಕೆ ನಿಷೇಧಿಸಲ್ಪಟ್ಟಿದ್ದಾಗ ರೈಸಿಂಗ್ ಪುಣೆ ವಾರಿಯರ್ಸ್ ತಂಡವನ್ನೂ 2 ವರ್ಷ ಮುನ್ನಡೆಸಿದ್ದಾರೆ. ಮುಂದಿನ 2020ರ ಆವೃತ್ತಿಯಲ್ಲೂ ಧೋನಿಯೇ ಸಿಎಸ್‌ಕೆ ನಾಯಕವಾಗಿರಲಿದ್ದಾರೆ ಎನ್ನುತ್ತಿದ್ದಾರೆ ಸಿಎಸ್‌ಕೆ ಅಧಿಕಾರಿಗಳು.
ಐಪಿಎಲ್ ಒಟ್ಟು 12 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅತೀ ಯಶಸ್ವಿ ತಂಡಗಳಾಗಿ ಗುರುತಿಸಲ್ಪಟ್ಟಿವೆ. 4 ಸಾರಿ ಎಂಐ ಗೆದ್ದಿದ್ದರೆ, 3 ಸಾರಿ ಸಿಎಸ್‌ಕೆ ಚಾಂಪಿಯನ್ ಆಗಿತ್ತು. ಕಳೆದ 2019ರ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಈ ಯಾದಿಯಲ್ಲಿ ಮೇಲುಗೈ ಸಾಧಿಸಿದೆ.