Shreyas Iyer: ಟೀಮ್ ಇಂಡಿಯಾ ಟಿ-20ಗೆ ಹೊಸ ನಾಯಕ: ವರದಿ
Shreyas Iyer: ಭಾರತ ತಂಡಕ್ಕೆ 2026ರ ಟಿ20 ವಿಶ್ವಕಪ್ ಕಿರೀಟ ತೊಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಈಗ ನಾಯಕತ್ವ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಬ್ಯಾಟಿಂಗ್‌ನಲ್ಲಿ ಅನುಭವಿಸುತ್ತಿರುವ ಸತತ ವೈಫಲ್ಯ ಹಾಗೂ ಫಾರ್ಮ್ ಕೊರತೆಯಿಂದಾಗಿ ಬಿಸಿಸಿಐ ಆಯ್ಕೆ ಸಮಿತಿಯು ನಾಯಕತ್ವದ ಬದಲಾವಣೆಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿರಬಹುದು ಮತ್ತು ಒಂದೂ ಟಿ20 ಸರಣಿಯನ್ನು ಸೋತಿಲ್ಲದಿರಬಹುದು. ಆದರೆ ಅವರ ಬ್ಯಾಟಿಂಗ್ ಅಂಕಿಅಂಶಗಳು ಆತಂಕ ಮೂಡಿಸಿವೆ. ಟಿ20 ವಿಶ್ವಕಪ್ 2026ರಲ್ಲಿ ಆಡಿದ ಪಂದ್ಯಗಳಲ್ಲಿ ಕೇವಲ 242 ರನ್. ಇದರಲ್ಲಿ ಒಂದೇ ಒಂದು ಅರ್ಧಶತಕ ಸೇರಿದೆ ಅಷ್ಟೆ.

ಎಸ್‌ಕೆವೈ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲಿದ್ದಾರಾ?
ಮತ್ತೊಂದೆಡೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ 10 ಪಂದ್ಯಗಳಲ್ಲಿ ಕೇವಲ 195 ರನ್ ಗಳಿಸದ್ದಾರೆ ಅಷ್ಟೆ. 35 ವರ್ಷ ದಾಟಲಿರುವ ಸೂರ್ಯ ಅವರ ವಯಸ್ಸು ಮತ್ತು ಮುಂಬರುವ 2028ರ ಒಲಿಂಪಿಕ್ಸ್ ದೃಷ್ಟಿಯಿಂದ ಯುವ ನಾಯಕನನ್ನು ಬೆಳೆಸಲು ಬಿಸಿಸಿಐ ಆಸಕ್ತಿ ತೋರಿದೆ ಎನ್ನಲಾಗುತ್ತಿದೆ.
ಅಯ್ಯರ್‌ಗೆ ನಾಯಕನ ಪಟ್ಟ ಕಟ್ಟುವ ಸಾಧ್ಯತೆ
ಸೂರ್ಯಕುಮಾರ್ ಅವರ ಸ್ಥಾನಕ್ಕೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ. ಐಪಿಎಲ್‌ನಲ್ಲಿ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಮೊದಲ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಬೀಗಿದೆ. ಬ್ಯಾಟಿಂಗ್‌ನಲ್ಲೂ ಅಬ್ಬರಿಸುತ್ತಿರುವ ಅವರು 9 ಇನ್ನಿಂಗ್ಸ್‌ಗಳಲ್ಲಿ 333 ರನ್ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಮೂಲಗಳ ಪ್ರಕಾರ ಐಪಿಎಲ್ ಮುಗಿದ ಬಳಿಕ ನಡೆಯಲಿರುವ ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದ ನಾಯಕನನ್ನಾಗಿ ಘೋಷಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ತಮ್ಮ ನಾಯಕತ್ವದ ಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ. 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದ ಅವರು 2025ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ವರೆಗೂ ಮುನ್ನಡೆಸಿದ್ದರು. ಒತ್ತಡದ ಪರಿಸ್ಥಿತಿಯನ್ನು ತಂಡವನ್ನು ನಿಭಾಯಿಸುವ ಅವರ ರೀತಿ ಆಯ್ಕೆ ಸಮಿತಿ ಗಮನ ಸೆಳೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೂರ್ಯಕುಮಾರ್ ಯಾದವ್ ತಾನು ಇನ್ನೂ ಎರಡು ವರ್ಷಗಳ ಕಾಲ ನಾಯಕನಾಗಿ ಮುಂದುವರಿಯುವ ಇಚ್ಛೆಯನ್ನೂ ಇತ್ತೀಚೆಗಷ್ಟೇ ವ್ಯಕ್ತಪಡಿಸಿದ್ದರು. ಆದರೂ ಆಯ್ಕೆ ಸಮಿತಿಯು ಭವಿಷ್ಯದ ದೃಷ್ಟಿಯಿಂದ ಅಯ್ಯರ್ ಅವರಿಗೆ ಮಣೆ ಹಾಕುವ ಸೂಚನೆ ನೀಡಿದೆ ವರದಿಯಾಗಿದೆ. ಇವೆಲ್ಲಾ ಬೆಳವಣಿಗೆಗಳ ನಡುವೆ ಸತತವಾಗಿ ಸರಣಿಗಳನ್ನು ಗೆಲ್ಲುತ್ತಿರುವ ಸೂರ್ಯ ಅವರನ್ನು ಬ್ಯಾಟಿಂಗ್ ಫಾರ್ಮ್ ನೆಪವೊಡ್ಡಿ ಕೆಳಗಿಳಿಸುವುದು ಸರಿಯೇ ಎಂಬ ಚರ್ಚೆ ಈಗ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications