ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸುವ ಕನಸು ಎರಡೂ ತಂಡಗಳದ್ದಾಗಿದೆ. ಈಡನ್ ಗಾರ್ಡನ್ ಅಂಗಳದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಮುಂಬೈಗೆ ಪ್ರಯಾಣ ಬೆಳೆಸುವ ಆಸೆಯನ್ನು ಸೂರ್ಯಕುಮಾರ್ ಯಾದವ್ ಪಡೆ ಮಾಡಿಕೊಂಡಿದೆ. ಈ ವೇಳೆ ಅಭಿಮಾನಿಗಳ ಮನದಲ್ಲಿ ಇರುವ ಪ್ರಶ್ನೆ ಒಂದೇ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ತಿಲಕ್ ವರ್ಮಾ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ? ಎಂಬುದಾಗಿದೆ. ಇದಕ್ಕೆ ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಉತ್ತರ ನೀಡಿದ್ದಾರೆ.
ಭಾರತ ಸೂಪರ್ 8 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಆರಂಭಿಕರಾಗಿ ಇಶಾನ್ ಬದಲಿಗೆ ಸಂಜು ಸ್ಯಾಮ್ಸನ್ ಕಣಕ್ಕೆ ಇಳಿದಿದ್ದರು. ಅಲ್ಲದೆ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಇನ್ನು ಭರವಸೆಯ ಬ್ಯಾಟರ್ ತಿಲಕ್ ವರ್ಮಾ ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಈ ಸಂಯೋಜನೆಯನ್ನು ನೋಡಿದ ಬಳಿಕ ಭಾರತ ಅಭಿಮಾನಿಗಳಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬ ಪ್ರಶ್ನೆ ಎದ್ದಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಮಾತನಾಡಿದರು. ಈ ವೇಳೆ ಅವರಿಗೆ ತಿಲಕ್ ವರ್ಮಾ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಎಂದು ಕೇಳಲಾಗಿತ್ತು. ಆಗ ಅವರು ತಿಲಕ್ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದನ್ನು ಈಗಲೇ ನಿರ್ಧರಿಸಲು ಆಗದು. ತಂಡದಲ್ಲಿ ಹಲವು ಆಯ್ಕೆಗಳು ಇವೆ. ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಟಾಪ್ ಆರ್ಡರ್‌ನಲ್ಲಿ ಆಡುವುದು ತಂಡಕ್ಕೆ ಲಾಭದಾಯಕವಾಗಿದೆ. ಎದುರಾಳಿ ತಂಡದ ಬೌಲಿಂಗ್ ಯೋಜನೆಗೆ ಅನುಗುಣವಾಗಿ, ತಂಡದ ಬ್ಯಾಟಿಂಗ್ ಕ್ರಮಾಂಕ ನಿರ್ಧರಿಸಲಾಗುವುದು ಎಂದಿದ್ದಾರೆ.
ತಿಲಕ್ ವರ್ಮಾ 10 ಓವರ್‌ಗಳ ಸುಮಾರಿಗೆ ಕಣಕ್ಕಿಳಿದು ಬ್ಯಾಟಿಂಗ್ ಮಾಡಿದ ರೀತಿ ಭರವಸೆಯನ್ನು ಮೂಡಿಸಿದೆ. ಅವರು ಆ ಪರಿಸ್ಥಿತಿಗೆ ಒಗ್ಗಿಕೊಂಡ ರೀತಿ ಮತ್ತು ಪಂದ್ಯವನ್ನು ನಿಭಾಯಿಸಿದ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಸಹಾಯಕ ಕೋಚ್ ರಯಾನ್ ತಿಲಕ್ ಅವರ ಬೆನ್ನು ತಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತಿಲಕ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅವರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುತ್ತಿರುವುದು ಖುಷಿ ತಂದಿದೆ. ಮಧ್ಯಮ ಕ್ರಮಂಕಾದಲ್ಲಿ ಅವರಂತಹ ಆಟಗಾರ ಇರುವದು ನಮ್ಮ ತಂಡಕ್ಕೆ ಆನೆ ಬಲ ಬಂದಂತೆ ಆಗುತ್ತದೆ. ತಿಲಕ್ ತಂಡಕ್ಕೆ ಅಗತ್ಯ ಇರುವು ಜವಾಬ್ದಾರಿಯನ್ನು ಹೊಂದುವ ಆಟಗಾರ ಎಂದು ತಿಳಿಸಿದ್ದಾರೆ.
ತಿಲಕ್ ವರ್ಮಾ ಜಿಂಬಾಬ್ವೆ ವಿರುದ್ದ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 16 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿದ್ದರು.