
ಕರಾಚಿ: ಐಸಿಸಿ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಬದ್ಧ ಎದುರಾಳಿ ಭಾರತವನ್ನು ಸೋಲಿಸುವ ಬಗ್ಗೆ ಪಾಕಿಸ್ತಾನದ ವೇಗಿ ಹಸನ್ ಅಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದಂತೆಯೇ ಈ ಬಾರಿಯ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲುತ್ತದೆ ಎಂದು ಅಲಿ ಹೇಳಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆದ್ದು ಬೀಗಿತ್ತು. ಆ ಬಳಿಕ ಎರಡು ಸಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. 2018ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯ ಮತ್ತು 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯ. ಈ ಎರಡರಲ್ಲೂ ಭಾರತ ಗೆದ್ದಿತ್ತು.
ಯಾವತ್ತಿಗೂ ಕೂಡ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪಂದ್ಯಗಳಿದ್ದಾಗ ವಿಶ್ವದ ಗಮನ ಅಂದಿನ ಪಂದ್ಯದ ಮೇಲಿರುತ್ತದೆ. ವಿಶೇಷವೆಂದರೆ ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಈವರೆಗೂ ಪಾಕ್ ತಂಡ ಭಾರತವನ್ನು ಸೋಲಿಸಿಲ್ಲ. ಇನ್ನೊಂದು ಗಮ್ಮತ್ತೆಂದರೆ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಭಾರತವನ್ನು ಸೋಲಿಸಲು ಪಾಕ್‌ನಿಂದಾಗಿಲ್ಲ.
"2017ರಲ್ಲಿ ನಾವು ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾಗ ಅದೊಂದು ಅದ್ಭುತ ಕ್ಷಣವಾಗಿ ನಮಗೆ ಅನ್ನಿಸಿತ್ತು. ಆವತ್ತಿನಂತೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲೂ ಮತ್ತೆ ನಾವು ಭಾರತವನ್ನು ಸೋಲಿಸುತ್ತೇವೆ. ಭಾರತದ ವಿರುದ್ಧ ಪಂದ್ಯವಿದ್ದಾಗ ಯಾವತ್ತಿಗೂ ಒತ್ತಡವಿರುತ್ತದೆ. ಯಾಕೆಂದರೆ ಎರಡೂ ದೇಶಗಳ ಅಭಿಮಾನಿಗಳಲ್ಲೂ ಹೆಚ್ಚಿನ ನಿರೀಕ್ಷೆಗಳಿರುತ್ತವೆ," ಎಂದು ಅಲಿ ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬಹು ದಿನಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 24ರಂದು ಈ ಪಂದ್ಯ ನಡೆಯಲಿದೆ.