ಕೊಹ್ಲಿಯ ವಿರಾಟ್ ಪ್ರದರ್ಶನಕ್ಕೆ ಸಿಡ್ನಿ ಗ್ರೌಂಡ್ ಸಜ್ಜು?
ಸಿಡ್ನಿ, ಮಾ. 25 : ಗಡಿಯಾರ ಮುಳ್ಳು ಟಿಕ್ ಟಿಕ್ ಸಾಗುತ್ತಿದ್ದಂತೆ ಕ್ರಿಕೆಟ್ ಜ್ವರದಿಂದ ಬಳಲುತ್ತಿರುವ ಭಾರತದ ಕ್ರಿಕೆಟ್ ಪ್ರೇಮಿಗಳ ಎದೆಬಡಿತವೂ ಒಂದೆರಡು ಹೆಚ್ಚಾಗಿಯೇ ಬಡಿದುಕೊಳ್ಳುತ್ತಿರುತ್ತದೆ. ಕಚೇರಿಗೆ ಚಕ್ಕರ್ ಹಾಕಲು ಹಲವಾರು ನೌಕರರು ಥಿಂಕಿಸುತ್ತಿದ್ದರೆ, ಕರ್ನಾಟಕದ ಅನೇಕ ಗುಡಿಗಳಲ್ಲಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸದೆಬಡಿಯಲೆಂದು ಪೂಜೆಪುನಸ್ಕಾರಗಳು ನಡೆಯುತ್ತಿವೆ.
ಎಲ್ಲಕ್ಕಿಂತ ಹೆಚ್ಚಾಗಿ, ಹಿಂದೆಂದೂ ಮಾಡದ ಸಾಧನೆಯನ್ನು ಮಾಡಿ, ಇತಿಹಾಸ ಸೃಷ್ಟಿಸಲು ಭಾರತ ತಹತಹಿಸುತ್ತಿದೆ. ಹನ್ನೊಂದನೇ ವಿಶ್ವಕಪ್ ನಲ್ಲಿ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸುವ ಎಲ್ಲ ಪ್ರಯತ್ನವನ್ನು ಮಾಡಲಿದೆ ಎಂದು ಭಾರತದ ಉಪನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಸಿಸಿ ವಿಶ್ವಕಪ್ 2015ರಲ್ಲಿ ಸತತ ಏಳು ಪಂದ್ಯಗಳನ್ನು ಗೆದ್ದು ಅಜೇಯವಾಗುಳಿದಿರುವ ಭಾರತ, ಈ ವಿಶ್ವಕಪ್‌ನ ಆತಿಥ್ಯವಹಿಸಿರುವ ಆಸ್ಟ್ರೇಲಿಯಾ ತಂಡವನ್ನು ಮಾ.26ರಂದು ಎದುರಿಸಲು ಸಕಲ ಸಿದ್ಧತೆ ನಡೆಸಿದೆ. ಭಾರತೀಯ ಕಾಲಮಾನ ಬೆಳಿಗ್ಗೆ ಎಂಟೂಮುಕ್ಕಾಲಿಗೆ ಮಹೇಂದ್ರ ಸಿಂಗ್ ಧೋನಿ ಅಥವಾ ಆಸೀಸ್ ಕ್ಯಾಪ್ಟನ್ ಮೈಕಲ್ ಕ್ಲಾರ್ಕ್ ನಾಣ್ಯವನ್ನು ಆಗಸಕ್ಕೆ ಚಿಮ್ಮಲಿದ್ದಾರೆ.

ವಿರಾಟ್ ಉವಾಚ : "ಭಾರತೀಯ ಕ್ರಿಕೆಟ್‌ನಲ್ಲಿ ಹಿಂದೆಂದೂ ನಡೆಯದಂಥ ಸಾಧನೆ ಮಾಡಲು ವಿಶ್ವಕಪ್ ನಮಗೆ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಸತತ ಎರಡು ಬಾರಿ ವಿಶ್ವಕಪ್ ಗೆಲ್ಲುವುದು ನಮ್ಮ ಕನಸು. ತವರಿನಿಂದ ಹೊರಗೆ, ಅನ್ಯದೇಶದಲ್ಲಿ ಮತ್ತೊಂದು ವಿಶ್ವಕಪ್ ಭಾರತ ಗೆಲ್ಲುತ್ತದೆಂದು ಅನೇಕರು ಎಣಿಸಿರುವುದಿಲ್ಲ" ಎಂದು ವಿರಾಟ್ ಕೊಹ್ಲಿ ಬಿಸಿಸಿಐ ವೆಬ್‌ಸೈಟಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಸತತ ಏಳು ಪಂದ್ಯಗಳನ್ನು ಗೆದ್ದಿರುವುದರಿಂದ ಅಭಿಮಾನಿಗಳು ನಾವೇ ಫೆವರಿಟ್ ಎಂದು ಹೇಳುತ್ತಿದ್ದಾರೆ. ಇಲ್ಲಿಯವರೆಗೆ ಮೈದಾನದಲ್ಲಿನ ಅನುಭವ ಅದ್ಭುತವಾಗಿದೆ. ಮಾರ್ಚ್ 29ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಲ್ಲಿ ಕಪ್ ಹಿಡಿದೆತ್ತಿದರೆ ಜೀವನಪರ್ಯಂತ ಅದನ್ನು ಸವಿಯುತ್ತೇನೆ" ಎಂದು ಕೊಹ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳ ಆಸೆಯ ಭಾವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸಿಡ್ನಿಯಲ್ಲಿ ಭಾರತ ಆಸ್ಟ್ರೇಲಿಯನ್ನರ ಸದ್ದಡಗಿಸಿದರೆ, ಮೆಲ್ಬೋರ್ನ್‌ನಲ್ಲಿ ಭಾರತ ಮತ್ತೊಮ್ಮೆ ಆರ್ಭಟಿಸುವುದು ಖಂಡಿತ. ಫೋಟೋಫಿನಿಷ್ ಕಂಡ ಮೊದಲ ಸೆಮಿ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿರುವ ನ್ಯೂಜಿಲೆಂಡ್ ಮೊಟ್ಟಮೊದಲ ಬಾರಿಗೆ ಫೈನಲ್ ತಲುಪಿ ಕಪ್ಪು ಎತ್ತಿಹಿಡಿಯುವ ಕನವರಿಕೆಯಲ್ಲಿದೆ. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ಕೂಡ ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ. [ನ್ಯೂಜಿಲೆಂಡ್ ಗೆಲುವಿನ ಕೇಕೆ]
ಬರಬೇಡ್ರಪ್ಪ ಡಕ್ವರ್ತ್ ಲೂಯಿಸ್ : ಸಂತಸದ ಸಂಗತಿಯೆಂದರೆ, ಸಿಡ್ನಿಯಲ್ಲಿ ಗುರುವಾರ ಬೆಳಗಿನ ಜಾವ ಅಲ್ಲಲ್ಲಿ ಮೋಡಗಳು ವಿಸಿಟ್ ಹಾಕಿದರೂ, ಇಡೀದಿನ ಆಕಾಶ ಶುಭ್ರವಾಗಿರಲಿದೆ ಎಂದು ಹವಾಮಾನ ಪಂಡಿತರು ಹೇಳುತ್ತಿದ್ದಾರೆ. ಮಳೆ ಬಂದು ಪಂದ್ಯದ ಮಜವನ್ನೇ ಹಾಳುಮಾಡುವ ಡಕ್ವರ್ತ್-ಲೂಯಿಸ್ ಸದ್ಯ ಸಿಡ್ನಿ ಗ್ರೌಂಡೊಳಗೆ ಇಣುಕದಿದ್ದರೆ ಸಾಕು ಎಂದು ಹಲವರು ವರುಣನ ಪೂಜೆಯಲ್ಲಿ ತೊಡಗಿದ್ದಾರೆ.
ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದರೂ ಮುಂದಿನ ಪಂದ್ಯಗಳಲ್ಲಿ ಮಿಂಚದ ವಿರಾಟ್ ಕೊಹ್ಲಿ ಸಿಡ್ನಿ ಗ್ರೌಂಡಲ್ಲಿ ಸಿಡಿಯಲಿ ಎಂದು ಕ್ರಿಕೆಟ್ ಪ್ರೇಮಿಗಳು ಆಶಿಸುತ್ತಿದ್ದಾರೆ. ರೋಹಿತ್, ಶಿಖರ್, ರೈನಾ, ಶಮಿ, ಮಹೇಂದ್ರ ಸಿಂಗ್ ಧೋನಿಗಳಂಥ ಮ್ಯಾಚ್ ವಿನ್ನರ್‌ಗಳನ್ನು ಭಾರತ ಹೊಂದಿದ್ದರೂ ಇಡೀ ಭಾರತ ವಿರಾಟ್ ಕೊಹ್ಲಿಯತ್ತ ದೃಷ್ಟಿ ನೆಟ್ಟಿದೆ. ಸಿಡ್ನಿಯಲ್ಲಿ ಅನುಷ್ಕಾ ಶರ್ಮಾ ಕೂಡ ಇರಲಿದ್ದಾರೆ! ಇನ್ನೇನು ಬೇಕು? [ಧೋನಿ ರಣತಂತ್ರ]
ಕೋರ್ಟ್ ಕಲಾಪ, ಕೋಡ್ ಕುಟ್ಟಿಂಗ್ ಬಂದ್ : ಕರ್ನಾಟಕದಲ್ಲಿ ಗುರುವಾರ ಕೋರ್ಟು ಕಲಾಪಗಳು ನಡೆಯುವುದು ಅನುಮಾನ. ಟೆಕ್ಕಿಗಳು ಕೋಡ್ ಕುಟ್ಟುವುದೂ ಡೌಟು, ಇನ್ನು ಮಕ್ಕಳಿಗೆ ಬೇಸಿಗೆ ರಜಾ ಬಂದಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಕೆ. ಚಂದ್ರಶೇಖರ ರಾವ್ ಅವರು, ಕ್ರಿಕೆಟ್ ನೋಡಿ ಮಜಾ ಮಾಡ್ರೋ ಮಕ್ಳಾ ಅಂತ ತೆಲಂಗಾಣ ರಾಜ್ಯದ ಎಲ್ಲ ಶಾಲಾಕಾಲೇಜುಗಳಿಗೆ ರಜಾ ಘೋಷಿಸಿಬಿಟ್ಟಿದ್ದಾರೆ.
ಈ ಟೂರ್ನಿಯ ಎಲ್ಲ ಪಂದ್ಯಗಳಲ್ಲಿಯೂ ಎಲ್ಲಾ ಹತ್ತು ವಿಕೆಟ್ ಕಿತ್ತು ನಮ್ಮ ಬೌಲಿಂಗ್ ಬಲ ಏನೆಂದು ತೋರಿಸಿರುವ ಭಾರತದ ಕಾಲೆಳೆಯುವ ತಂತ್ರದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗರು ಮುಳುಗಿದ್ದಾರೆ. ಮಾತಿನಲ್ಲಿ ಕಾಲೆಳೆದರೆ ಉತ್ತರ ಕೊಡುವುದು ಹೇಗೆಂದು ಭಾರತೀಯರು ತೋರಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಮಸ್ತ್ ಮಜಾ ಕಟ್ಟಿಟ್ಟದ್ದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications