ಆಫ್ಘನ್ ಸಮರ ಗೆದ್ದ ಬಳಿಕ ಸರ್ಫರಾಝ್ ಅಹ್ಮದ್ ಹೇಳಿದ್ದಿದು!

ಲಂಡನ್, ಜೂನ್ 30: ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 1992ರ ವಿಶ್ವ ಚಾಂಪಿಯನ್ಸ್ ಪಾಕಿಸ್ತಾನ ತಂಡ ಶನಿವಾರ ತಿಣುಕಾಡಿ ಕೊನೆಗೆ 3 ವಿಕೆಟ್‌ಗಳ ಜಯ ದಾಖಲಿಸಿತ್ತು. ಈ ಜಯದೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್ಸ್ ತಲುಪುವ ತನ್ನ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ ಮೊದಲ ಬಾರಿ ಅಗ್ರ 4ರ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘನ್ ಪಡೆ 227/9 ರನ್ ದಾಖಲಿಸಿದರೆ, ಗುರಿ ಬೆನ್ನತ್ತಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 7 ವಿಕೆಟ್‌ಗೆ 230 ರನ್‌ಗಳನ್ನು ಗಳಿಸಿ ಜಯದ ನಿಟ್ಟುಸಿರು ಬಿಟ್ಟಿತು.
ಕೊನೆಯ ಓವರ್ ವರೆಗೂ ರೋಚಕತೆ ಹಿಡಿದಿಟ್ಟಿದ್ದ ಪಂದ್ಯದಲ್ಲಿ ಜಯ ದಾಖಲಿಸಿದ ಬಳಿಕ ಮಾತನಾಡಿದ ನಾಯಕ ಸರ್ಫರಾಝ್ ಅಹ್ಮದ್, "ಸಂಪೂರ್ಣ ತಂಡದ ಪರಿಶ್ರಮಕ್ಕೆ ಒಲಿದೆ ಜಯವಿದು" ಎಂದಿದ್ದಾರೆ.
"ಇದೊಂದು ಅದ್ಭುತ ಗೆಲುವು. ಬ್ಯಾಟಿಂಗ್‌ಗೆ ಸುಲಭದ ಪಿಚ್ ಇದಲ್ಲ. ಇಂತಹ ಪಿಚ್‌ನಲ್ಲಿ ಇಮಾದ್ ಅವರ ಬ್ಯಾಟಿಂಗ್ ನಿಜಕ್ಕೂ ಪ್ರಶಂಸಾರ್ಹ. ಅವರು ಒತ್ತಡ ನಿಭಾಯಿಸಿದ ರೀತಿಗೆ ಸಲಾಮ್. ಗುರಿ ಬೆನ್ನತ್ತುವುದು ಸುಲಭವಲ್ಲ ಎಂಬುದನ್ನು ಅರಿತಿದ್ದೆವು. ಜೊತೆಗೆ ಎದುರಾಳಿ ತಂಡದ ಬೌಲರ್‌ಗಳು ಸ್ಥಿತಿಗಳ ಉತ್ತಮ ಬಳಕೆ ಮಾಡಿಕೊಂಡರು," ಎಂದು ಸರ್ಫರಾಝ್ ಹೇಳಿದ್ದಾರೆ.
"ಬಾಬರ್ ಮತ್ತು ಇಮಾದ್ ಅದ್ಭುತವಾಗಿ ಆಡಿದರು. ಮಧ್ಯಮ ಕ್ರಮಾಂಕದಲ್ಲಿ ಜೊತೆಯಾಟದ ಅಗತ್ಯ ನಮಗಿತ್ತು. ಆದರೆ ಅದು ಲಭ್ಯವಾಗಲಿಲ್ಲ. ಆದರೆ ಕೊನೆಗೆ ಉತ್ತಮ ಜೊತೆಗಾರಿಕೆ ಮೂಡಿಬಂದಿತು. ಇದೊಂದು ತಂಡವಾಗಿ ಹೋರಾಡಿ ಗೆದ್ದ ಪಂದ್ಯ. ವಿಶ್ವಕಪ್‌ನಲ್ಲಿ ಯಾವುದೇ ಒಂದು ಪಂದ್ಯವೂ ಸುಲಭವಾದುದ್ದಲ್ಲ ಎಂಬುದನ್ನು ಅರಿತಿದ್ದೇವೆ. ಹೀಗಾಗಿ ಒಂದೊಂದೇ ಪಂದ್ಯದ ಕಡೆಗೆ ಗಮನ ನೀಡಲಿದ್ದೇವೆ,'' ಎಂದಿದ್ದಾರೆ.
ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಪಾಯಕಾರಿ ಬಾಂಗ್ಲಾದೇಶ ವಿರುದ್ಧ ಪೈಪೋಟಿ ನಡೆಸಲಿದ್ದು, ಇಲ್ಲಿ ಗೆಲುವು ಸಾಧ್ಯವಾದರಷ್ಟೇ ಸೆಮಿಫೈನಲ್ಸ್ ಪ್ರವೇಶದ ಅವಕಾಶ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications