
ಸೋಮವಾರ, ಫೆಬ್ರವರಿ 13ರಂದು 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಮಹಿಳಾ ಐಪಿಎಲ್)ಗಾಗಿ ಮುಂಬೈನಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಭಾರತ ಮಹಿಳಾ ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ (ಲಕ್ನೋ) ತಂಡ ಖರೀದಿಸಿದೆ.
ಪ್ರಮುಖ ಸ್ಪಿನ್ನರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ದೀಪ್ತಿ ಶರ್ಮಾ ಅವರಿಗೆ 2.60 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಫ್ರಾಂಚೈಸಿ ಖರೀದಿಸಿತು.
ಭಾರತದ ಈ ಸ್ಟಾರ್ ಆಲ್‌ರೌಂಡರ್ 50 ಲಕ್ಷ ಮೂಲ ಬೆಲೆಯಲ್ಲಿ ಸ್ಥಾನ ಪಡೆದಿದ್ದರು ಮತ್ತು ನಿರೀಕ್ಷಿಸಿದಂತೆ ದೊಡ್ಡ ಮೊತ್ತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರಪ್ರದೇಶ ಮೂಲದ ಸ್ಟಾರ್ ಆಟಗಾರ್ತಿಗಾಗಿ ತೀವ್ರ ಬಿಡ್ಡಿಂಗ್ ಪೈಪೋಟಿಯಲ್ಲಿ ಯುಪಿ ವಾರಿಯರ್ಸ್ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಹಿಂದಿಕ್ಕಿದರು.
ಮೊದಲು ದೀಪ್ತಿ ಶರ್ಮಾ ಅವರ ಬಿಡ್ಡಿಂಗ್ ಸ್ಪರ್ಧೆ ತೆರೆದ ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್ ಕೂಡಿಕೊಂಡಿತು. ನಂತರ ಗುಜರಾತ್ ಜೈಂಟ್ಸ್ ಕೂಡ ಬಿಡ್ಡಿಂಗ್ ಸ್ಪರ್ಧೆಗೆ ಇಳಿಯಿತು. ನಾಲ್ಕನೇಯದಾಗಿ ಬಂದ ಯುಪಿ ವಾರಿಯರ್ಸ್ ಅಂತಿಮವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.

25 ವರ್ಷದ ದೀಪ್ತಿ ಶರ್ಮಾ ನವೆಂಬರ್ 2014ರಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ನಂತರ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ.
ದೀಪ್ತಿ ಶರ್ಮಾ ಐಸಿಸಿ ಟಿ20 ಆಲ್‌ರೌಂಡರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಮತ್ತು ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 86 ಇನ್ನಿಂಗ್ಸ್‌ಗಳಿಂದ 97 ವಿಕೆಟ್‌ಗಳನ್ನು ಪಡೆದಿರುವ ದೀಪ್ತಿ ಶರ್ಮಾ, ಟಿ20 ಪಂದ್ಯಗಳಲ್ಲಿ 1000 ರನ್‌ಗಳ ಗಡಿ ಸಮೀಪಿಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಗಮನಿಸಿದರೆ ದೀಪ್ತಿ ಶರ್ಮಾ ಅವರು ಯುಪಿ ವಾರಿಯರ್ಸ್ ತಂಡಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ.
ದೀಪ್ತಿ ಶರ್ಮಾ ಪ್ರಸ್ತುತ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರಲ್ಲಿ ಭಾರತ ತಂಡದ ಪರ ಆಡುತ್ತಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಜವೇರಿಯಾ ಖಾನ್ ಅವರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ಒದಗಿಸಿದರು. ಭಾರತ ತಂಡ ಏಳು ವಿಕೆಟ್‌ಗಳಿಂದ ಜಯ ದಾಖಲಿಸಿದ್ದರಿಂದ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.
2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತದ ಕೊನೆಯ ಟಿ20 ತ್ರಿಕೋನ ಸರಣಿಯಲ್ಲಿ ದೀಪ್ತಿ ಶರ್ಮಾ ಒಂಬತ್ತು ವಿಕೆಟ್‌ಗಳೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.