ಮಹಿಳಾ ವಿಶ್ವಕಪ್ ಫೈನಲ್: ಪುರುಷ ಕ್ರಿಕೆಟಿಗರೂ ಮಾಡಿರದ ದಾಖಲೆ ಬರೆದ ಪತ್ನಿಗೆ ಮಿಚೆಲ್ ಸ್ಟಾರ್ಕ್ ಚಪ್ಪಾಳೆ

ಕ್ರಿಕೆಟ್ ಜೋಡಿಗಳಲ್ಲಿ ಒಂದಾದ ಮಿಚೆಲ್ ಸ್ಟಾರ್ಕ್ ಮತ್ತು ಅಲಿಸ್ಸಾ ಹೀಲಿ ಜೋಡಿ ಆಗಾಗ ಸಾಕಷ್ಟು ಸುದ್ದಿ ಮತ್ತು ಚರ್ಚೆಗೆ ಕಾರಣವಾಗುತ್ತಿರುತ್ತದೆ. ಮಿಚೆಲ್ ಸ್ಟಾರ್ಕ್ ಪಂದ್ಯವನ್ನಾಡುವಾಗ ಪತ್ನಿ ಅಲಿಸ್ಸಾ ಹೀಲಿ ಮೈದಾನಕ್ಕೆ ಭೇಟಿ ನೀಡಿ ಪಂದ್ಯವನ್ನು ವೀಕ್ಷಿಸುತ್ತಾ ತನ್ನ ಪತಿಗೆ ಹಲವಾರು ಬಾರಿ ಹುರಿದುಂಬಿಸಿದ್ದಾರೆ. ಅದೇ ರೀತಿ ಮಿಚೆಲ್ ಸ್ಟಾರ್ಕ್ ಕೂಡ ತನ್ನ ಪತ್ನಿ ಅಲಿಸಾ ಹೀಲಿ ಆಡುವ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ತೆರಳಿ ಬೆಂಬಲವನ್ನು ಸೂಚಿಸಿದ್ದಾರೆ.
ಈ ರೀತಿಯ ಮತ್ತೊಂದು ಸನ್ನಿವೇಶ ಇಂದು ( ಏಪ್ರಿಲ್ 3 ) ನಡೆಯುತ್ತಿರುವ ಮಹಿಳಾ ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿಯೂ ಕೂಡ ಕಂಡುಬಂದಿದೆ. ಹೌದು, ನ್ಯೂಜಿಲೆಂಡ್‌ನ ಕ್ರಿಸ್ಟ್ ಚರ್ಚ್ ಹ್ಯಾಗ್ಲೆ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳ ನಡುವೆ ಮಹಿಳಾ ವಿಶ್ವಕಪ್ 2022ರ ಫೈನಲ್ ಪಂದ್ಯ ಜರುಗುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ವನಿತೆಯರ ತಂಡ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ವನಿತೆಯರ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿ ಎದುರಾಳಿ ಇಂಗ್ಲೆಂಡ್ ವನಿತೆಯರ ತಂಡಕ್ಕೆ ಗೆಲ್ಲಲು 357 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಹೀಗೆ ಬೃಹತ್ ಮೊತ್ತವನ್ನು ಕಲೆ ಹಾಕಿರುವ ಆಸ್ಟ್ರೇಲಿಯಾ ವನಿತೆಯರ ತಂಡಕ್ಕೆ ತಂಡದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ 170 ರನ್‌ಗಳ ಬೃಹತ್ ಕೊಡುಗೆಯನ್ನು ನೀಡುವುದರ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಪುರುಷ ಕ್ರಿಕೆಟಿಗ ಅಥವಾ ಮಹಿಳಾ ಕ್ರಿಕೆಟ್ ಆಟಗಾರ್ತಿಯೂ ಕೂಡ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಗಿಲ್‌ಕ್ರಿಸ್ಟ್ ಹಿಂದಿಕ್ಕಿ ವಿಶ್ವ ದಾಖಲೆ ಬರೆದ ಹೀಲಿ
ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಅಲಿಸಾ ಹೀಲಿ 138 ಎಸೆತಗಳನ್ನು ಎದುರಿಸಿ 170 ರನ್ ಬಾರಿಸಿದ್ದಾರೆ. 26 ಬೌಂಡರಿಗಳನ್ನು ಚಚ್ಚಿದ ಅಲಿಸಾ ಹೀಲಿ ವಿಶ್ವಕಪ್ ಇತಿಹಾಸದಲ್ಲಿಯೇ ನೂತನ ದಾಖಲೆಯನ್ನು ಬರೆದಿದ್ದಾರೆ. ಅಲಿಸಾ ಹೀಲಿ ಈ ಇನ್ನಿಂಗ್ಸ್‌ನಲ್ಲಿ ಸಿಡಿಸಿರುವ ಈ ರನ್ ಪುರುಷರ ವಿಶ್ವಕಪ್ ಅಥವಾ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾಗಿರುವ ಅತ್ಯಧಿಕ ವೈಯಕ್ತಿಕ ರನ್ ಆಗಿದೆ. ಈ ಮೂಲಕ ಅಲಿಸಾ ಹೀಲಿ ಪುರುಷರೂ ಸಹ ಗಳಿಸಿರದಂತಹ ರನ್ ಗಳಿಸಿ ಮಹಿಳಾ ಕ್ರಿಕೆಟಿಗರು ಯಾವುದಕ್ಕೂ ಕಡಿಮೆಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಹಿಂದೆ 2007ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾದ ಆಟಗಾರ ಗಿಲ್‌ಕ್ರಿಸ್ಟ್ 149 ರನ್ ಬಾರಿಸಿದ್ದರು. ಹಾಗೂ ಈ ರನ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾಗಿದ್ದ ಅತ್ಯಧಿಕ ರನ್ ಆಗಿತ್ತು. ಆದರೆ ಇದೀಗ 170 ರನ್ ಬಾರಿಸಿರುವ ಅಲಿಸಾ ಹೀಲಿ ಗಿಲ್ ಕ್ರಿಸ್ಟ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಪತ್ನಿಯ ಶತಕ ಕಂಡು ಚಪ್ಪಾಳೆ ತಟ್ಟಿದ ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ಇಂಗ್ಲೆಂಡ್ ವನಿತೆಯರ ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯವನ್ನು ವೀಕ್ಷಿಸಲು ತೆರಳಿದ್ದ ಮಿಚೆಲ್ ಸ್ಟಾರ್ಕ್ ತನ್ನ ಪತ್ನಿ ಅಲಿಸಾ ಹೀಲಿ ಶತಕ ಬಾರಿಸಿದ್ದನ್ನು ಕಂಡು ಎದ್ದುನಿಂತು ಚಪ್ಪಾಳೆ ತಟ್ಟುವುದರ ಮೂಲಕ ಪ್ರೋತ್ಸಾಹವನ್ನು ನೀಡಿದರು.

ಸೆಮಿಫೈನಲ್ ಪಂದ್ಯದಲ್ಲೂ ಶತಕ ಬಾರಿಸಿ ಅಬ್ಬರಿಸಿದ್ದ ಹೀಲಿ
ಇನ್ನು ಈ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಸೆಮಿಫೈನಲ್ ಹಂತದಲ್ಲಿ ವೆಸ್ಟ್ ಇಂಡೀಸ್ ವನಿತೆಯರ ತಂಡದ ವಿರುದ್ಧ ಸೆಣಸಾಟ ನಡೆಸಿತ್ತು. ಈ ಪಂದ್ಯದಲ್ಲಿಯೂ ಅಬ್ಬರಿಸಿದ್ದ ಅಲಿಸಾ ಹೀಲಿ 107 ಎಸೆತಗಳಿಗೆ 129 ರನ್ ಚಚ್ಚುವುದರ ಮೂಲಕ ತನ್ನ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications