ICC Women's World Cup Final 2022: ಇಂಗ್ಲೆಂಡ್ ಮಣಿಸಿ ಏಳನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ ವನಿತೆಯರು

ಕಳೆದ ಮಾರ್ಚ್ 4ರಂದು ಆರಂಭವಾದ ಪ್ರತಿಷ್ಠಿತ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ 2022ರ ಟೂರ್ನಿಯ ಫೈನಲ್ ಪಂದ್ಯ ಇಂದು ( ಏಪ್ರಿಲ್ 3 ) ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ಇಂಗ್ಲೆಂಡ್ ವನಿತೆಯರ ತಂಡಗಳ ನಡುವೆ ನಡೆಯಿತು. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ 71 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿದ್ದು, ಏಳನೇ ಬಾರಿಗೆ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ವನಿತೆಯರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಆಸ್ಟ್ರೇಲಿಯಾ ವನಿತೆಯರ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವನಿತೆಯರ ತಂಡ ಅಲಿಸಾ ಹೀಲಿ ವಿಶ್ವದಾಖಲೆಯ 170 ರನ್ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿ ಎದುರಾಳಿ ಇಂಗ್ಲೆಂಡ್ ವನಿತೆಯರ ತಂಡಕ್ಕೆ ಗೆಲ್ಲಲು 357 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಇನ್ನು ಆಸ್ಟ್ರೇಲಿಯಾ ವನಿತೆಯರ ತಂಡ ನೀಡಿದ ಈ ಬೃಹತ್ ರನ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ವನಿತೆಯರ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಟಾಲಿ ಸ್ಕೀವರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ ಕೂಡ 30 ರನ್ ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡದ ಉಳಿದ ಆಟಗಾರ್ತಿಯರೆಲ್ಲರೂ ಔಟ್ ಆಗುವವರೆಗೂ ಕಣದಲ್ಲಿದ್ದು ಏಕಾಂಗಿ ಹೋರಾಟ ನಡೆಸಿದ ನಟಾಲಿ ಸ್ಕೀವರ್ 121 ಎಸೆತಗಳಲ್ಲಿ ಅಜೇಯ 148 ರನ್ ಬಾರಿಸಿದರು. ಈ ಮೂಲಕ 43.4 ಓವರ್‌ಗಳಲ್ಲಿ 285 ರನ್‌ಗಳಿಗೆ ಆಲ್ ಔಟ್ ಆದ ಇಂಗ್ಲೆಂಡ್ ಟ್ರೋಫಿ ಎತ್ತಿ ಹಿಡಿಯುವುದರಲ್ಲಿ ವಿಫಲವಾಗಿದೆ.
ಆಸ್ಟ್ರೇಲಿಯಾ ವನಿತೆಯರ ಆಡುವ ಬಳಗ: ರಾಚೆಲ್ ಹೇನ್ಸ್, ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಮೆಗ್ ಲ್ಯಾನಿಂಗ್ (ನಾಯಕಿ), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಇಂಗ್ಲೆಂಡ್ ವನಿತೆಯರ ಆಡುವ ಬಳಗ: ಟಮ್ಮಿ ಬ್ಯೂಮಾಂಟ್, ಡೇನಿಯಲ್ ವ್ಯಾಟ್, ಹೀದರ್ ನೈಟ್ (ನಾಯಕಿ), ನಟಾಲಿ ಸ್ಕೈವರ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿಯಾ ಡಂಕ್ಲಿ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಷಾರ್ಲೆಟ್ ಡೀನ್, ಅನ್ಯಾ ಶ್ರಬ್ಸೋಲ್
ಆಸ್ಟ್ರೇಲಿಯಾ ಇನ್ನಿಂಗ್ಸ್: ಆಸ್ಟ್ರೇಲಿಯಾ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಅಲಿಸ್ಸಾ ಹೀಲಿ ಮತ್ತು ರಾಚೆಲ್ ಹೇಯ್ನ್ಸ್ ಉತ್ತಮ ಆರಂಭವನ್ನು ಮಾಡಿದರು. ರಾಚೆಲ್ ಹೇಯ್ನ್ಸ್ 68 ರನ್ ಗಳಿಸಿ ಔಟ್ ಆದರೆ, ಅಲಿಸ್ಸಾ ಹೀಲಿ 138 ಎಸೆತಗಳಲ್ಲಿ ಬರೋಬ್ಬರಿ 170 ರನ್ ಸಿಡಿಸಿ ಅಬ್ಬರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆತ್ ಮೂನಿ 68 ರನ್, ಗಾರ್ಡನರ್ 1 ರನ್, ನಾಯಕಿ ಮೆಗ್ ಲ್ಯಾನಿಂಗ್ 10 ರನ್, ತಹ್ಲಿಯಾ ಮೆಗ್ರಾ ಅಜೇಯ 8 ರನ್ ಮತ್ತು ಎಲ್ಲಿಸ್ ಪೆರ್ರಿ ಅಜೇಯ 17 ರನ್ ಬಾರಿಸಿದರು.

ಇಂಗ್ಲೆಂಡ್ ಇನ್ನಿಂಗ್ಸ್: ಮೊದಲೇ ಹೇಳಿದಂತೆ ಇಂಗ್ಲೆಂಡ್ ಪರ ನಟಾಲಿ ಸ್ಕೀವರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಟಮ್ಮಿ ಬ್ಯೂಮಾಂಟ್ 27, ಡಿ ವ್ಯಾಟ್ 4, ಹೀದರ್ ನೈಟ್ 26, ಆ್ಯಮಿ ಜೋನ್ಸ್ 20, ಸೋಫಿಯಾ ಡಂಕ್ಲಿ 22, ಕ್ಯಾಥರಿನ್ ಬ್ರಂಟ್ 1 ರನ್, ಸೋಫಿ ಎಕ್ಸೆಲ್ ಸ್ಟೋನ್ 3, ಕೇಟ್ ಕ್ರಾಸ್ 2, ಚಾರ್ಲಟ್ ಡೀನ್ 21 ಮತ್ತು ಅನ್ಯಾ ಶ್ರಬ್ ಸೋಲ್ 1 ರನ್ ಗಳಿಸಿದರು.
ಆಸ್ಟ್ರೇಲಿಯಾ ವನಿತೆಯರ ತಂಡದ ಪರ ಅಲನಾ ಕಿಂಗ್ ಮತ್ತು ಜೆಸ್ ಜೊನಾಸೆನ್ ತಲಾ 3 ವಿಕೆಟ್ ಪಡೆದರೆ, ಮೆಗನ್ ಸ್ಕಟ್ 2 ಹಾಗೂ ಆ್ಯಶ್ಲಿ ಗಾಡ್ನರ್ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications