
ಐಸಿಸಿ ಮಹಿಳಾ ವಿಶ್ವಕಪ್ 2022ರ ಟೂರ್ನಿ ಕಳೆದ ಮಾರ್ಚ್ 4ರಿಂದ ಆರಂಭವಾಗಿದ್ದು, ಮಾರ್ಚ್ 22ರವರೆಗೆ ಟೂರ್ನಿಯ ಲೀಗ್ ಹಂತದಲ್ಲಿ ಒಟ್ಟು 22 ಪಂದ್ಯಗಳು ನಡೆದಿವೆ. ಇನ್ನು ಇಂದು ( ಮಾರ್ಚ್ 22 ) ಟೂರ್ನಿಯಲ್ಲಿ ಎರಢು ಪಂದ್ಯಗಳು ನಡೆದಿದ್ದು, ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳ ನಡುವೆ ಪ್ರಥಮ ಪಂದ್ಯ ನಡೆದರೆ, ಇಂದಿನ ದ್ವಿತೀಯ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳು ಸೆಣಸಾಟ ನಡೆಸಿದವು.
ಇನ್ನು ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಅಸ್ಟ್ರೇಲಿಯಾ ಈ ಟೂರ್ನಿಯಲ್ಲಿ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ಕೂಡ ಸೋಲದೇ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಹೌದು, ಇದುವರೆಗೂ ಒಟ್ಟು 6 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಸೆಮಿ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇನ್ನು ಈ ಪಂದ್ಯದ ನಂತರ ನಡೆದ ಭಾರತ ವನಿತೆಯರ ತಂಡ ಹಾಗೂ ಬಾಂಗ್ಲಾದೇಶ ವನಿತೆಯರ ತಂಡಗಳ ನಡುವಿನ ಪಂದ್ಯದಲ್ಲಿ 110 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ವನಿತೆಯರ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ಪಡೆದುಕೊಂದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಕಳೆದ ಪಂದ್ಯದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೋತಿದ್ದ ಭಾರತ ವನಿತೆಯರ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಇನ್ನು ಅನಿವಾರ್ಯಕ್ಕೆ ತಕ್ಕಂತೆ ಈ ಪಂದ್ಯದಲ್ಲಿ ಭಾರತ ವನಿತೆಯರು ಗೆಲುವು ಸಾಧಿಸಿದ್ದು, ಈ ಗೆಲುವಿನ ನಂತರ ಅಂಕಪಟ್ಟಿಯಲ್ಲಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ನೋಡಿ.
ಇಲ್ಲಿಯವರೆಗೂ ತಾನು ಆಡಿರುವ ಎಲ್ಲಾ 6 ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಆಸ್ಟ್ರೇಲಿಯಾ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಈ ಮೂಲಕ ಸೆಮಿ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇನ್ನು ಇಂದು ಆಸ್ಟ್ರೇಲಿಯಾ ವನಿತೆಯರ ವಿರುದ್ಧದ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಟೂರ್ನಿಯಲ್ಲಿ ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಇಂದು ಬಾಂಗ್ಲಾದೇಶ ವನಿತೆಯರ ವಿರುದ್ಧ ಗೆದ್ದ ಭಾರತ ವನಿತೆಯರ ತಂಡ ಟೂರ್ನಿಯಲ್ಲಿ ಇಲ್ಲಿಯವರೆಗೂ 6 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ವೆಸ್ಟ್ ಇಂಡೀಸ್ ವನಿತೆಯರ ತಂಡ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನುಳಿದಂತೆ 5 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಗೆದ್ದಿರುವ ಇಂಗ್ಲೆಂಡ್ ವನಿತೆಯರ ತಂಡ 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, 6 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಗೆದ್ದಿರುವ ನ್ಯೂಜಿಲೆಂಡ್ ವನಿತೆಯರ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಹಾಗೂ ಬಾಂಗ್ಲಾದೇಶ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳೆರಡೂ ಟೂರ್ನಿಯಲ್ಲಿ ಇಲ್ಲಿಯವರೆಗು ಒಟ್ಟು 5 ಪಂದ್ಯಗಳನ್ನಾಡಿದ್ದು, ಎರಡೂ ತಂಡಗಳೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿವೆ. ಇನ್ನು ಬಾಂಗ್ಲಾದೇಶ ವನಿತೆಯರ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ವನಿತೆಯ ತಂಡ ಕೊನೆಯ ಸ್ಥಾನ ಪಡೆದುಕೊಂಡಿವೆ.
ಹೀಗೆ ಅಂಕಪಟ್ಟಿಯಲ್ಲಿ ಅಗ್ರಸ್ತಾನದಲ್ಲಿರುವ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದರೆ, ಕೊನೆಯ ಎರಡು ಸ್ಥಾನದಲ್ಲಿರುವ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಸೆಮಿ ಫೈನಲ್ ರೇಸ್‌ನಿಂದ ಹೊರಬಿದ್ದಿವೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾ, ಭಾರತ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಪ್ರವೇಶಿಸಲು ಉಳಿದಿರುವ ಮೂರು ಸ್ಥಾನಗಳಿಗಾಗಿ ಪೈಪೋಡಿ ಏರ್ಪಟ್ಟಿದೆ.